ಮಹಾಂತೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ವಾಲ್ಮೀಕಿ ಅವರನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಸನ್ಮಾನಿಸಿದರು.
ಬ್ಯಾಡಗಿ: ಅಪ್ಪ-ಅಮ್ಮ ಇಬ್ಬರೂ ದಿನ ಬೆಳಗಾದರೆ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (ತುಂಬು ತೆಗೆಯುವುದು) ಕೂಲಿ ಕೆಲಸ ಮಾಡಿಕೊಂಡು ಹೊಟ್ಟೆ ಹೊರೆಯುವ ಬಡ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿನಿ ಲಕ್ಷ್ಮೀ ವಾಲ್ಮೀಕಿ, ಮರುಮೌಲ್ಯಮಾಪನದ ಬಳಿಕ ಪ್ರಸಕ್ತ ವರ್ಷದ ಪಿಯುಸಿ (ಕಲಾ ವಿಭಾಗದಲ್ಲಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ.ಮೊದಲು ಫಲಿತಾಂಶ ಪ್ರಕಟಗೊಂಡಾಗ 586 ಅಂಕಗಳಿಸಿದ್ದ ಲಕ್ಷ್ಮೀ ವಾಲ್ಮೀಕಿ ಮರುಮೌಲ್ಯಮಾಪನದ ಬಳಿಕ, ಕನ್ನಡ 100 (ಮೊದಲು 98), ಅರ್ಥಶಾಸ್ತ್ರ 100-(99), ಸಮಾಜಶಾಸ್ತ್ರ 100-(98), ಇಂಗ್ಲಿಷ್ 97-(95), ರಾಜ್ಯಶಾಸ್ತ್ರ 98-(97), ಹೆಚ್ಚಿಗೆ 8 ಅಂಕಗಳಿಸಿದ ಬಳಿಕ 594 (600 ಶೇ.99) ರಾಜ್ಯಕ್ಕೆ 4ನೇ ರ‍್ಯಾಂಕ್ ಗಿಟ್ಟಿಸಿದ್ದಾಳೆ.
ಪಟ್ಟಣದ ಬೆಟ್ಟದ ಮಲ್ಲೇಶ್ವರ ಪ್ರದೇಶದ ಮೂಲೆಯಲ್ಲಿ ಸರ್ಕಾರದ ಆಶ್ರಯ ಮನೆ ಪಡೆದಿರುವ ಕುಟುಂಬ ಬಡತನದಲ್ಲೇ ಬದುಕು ಸಾಗಿಸುತ್ತಿದೆ. ತಂದೆ-ತಾಯಿ ಓದಿಲ್ಲವಾದರೂ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಹೊತ್ತು ದಿನನಿತ್ಯ ದುಡಿಯುತ್ತಿದ್ದಾರೆ. ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸವೇ ಇವರ ಆದಾಯದ ಮೂಲವಾಗಿದೆ. ಇಬ್ಬರು ಮಕ್ಕಳಿದ್ದು ಮಗ ಬಿಎ ಓದುತ್ತಿದ್ದಾನೆ. ಮಗಳು ಲಕ್ಷ್ಮೀ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿರುವುದು ಊರಿಗಷ್ಟೇ ಅಲ್ಲ ಜಿಲ್ಲೆಗೂ ಹೆಮ್ಮೆ ತಂದಿದೆ. ಕೂಲಿಯನ್ನೇ ನಂಬಿ ಜೀವನ ಸಾಗಿಸುವ ಇಂತಹ ಕುಟುಂಬದಲ್ಲಿ ಅರಳಿದ ಪ್ರತಿಭೆಯ ಸಾಧನೆ ನಿಜಕ್ಕೂ ಅಪೂರ್ವವಾಗಿದೆ.
ಪಟ್ಟಣದ ಎಸ್.ಎಸ್.ಪಿ.ಎನ್. ಪ್ರೌಢಶಾಲೆಯಲ್ಲಿ ಎಸ್ಸೆಸ್ಸಲ್ಸಿ ಪೂರ್ಣಗೊಳಿಸಿದ ಬಳಿಕ, ವಿಜ್ಞಾನ ಅಥವಾ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡದೇ, ಕಲಾ ವಿಭಾಗವನ್ನು ಆರಿಸಿಕೊಂಡು ಉನ್ನತ ಸಾಧನೆ ಮಾಡುವ ಕನಸನ್ನು ಬೆಳೆಸಿಕೊಂಡೆ ಎನ್ನುವ ಲಕ್ಷ್ಮೀ, ತನ್ನ ಶಿಕ್ಷಣದ ಬೆಳವಣಿಗೆಗೆ ನೆರವಾದ ಉಪ ಪ್ರಾಚಾರ್ಯ ಸುಭಾಸ್ ಎಲಿ ಅವರ ಮಾರ್ಗದರ್ಶನ, ಮಹಾಂತೇಶ್ವರ ಕಾಲೇಜಿನ ಪ್ರೋತ್ಸಾಹ ತನ್ನ ಸಾಧನೆಗೆ ಕಾರಣವೆಂದು ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾಳೆ.
ಸಾಧನೆಗೈದ ವಿದ್ಯಾರ್ಥಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಸಿಬ್ಬಂದಿಗಳು ಮನೆಗೆ ಸನ್ಮಾನಿಸಿ ಶುಭಾಶಯಗಳನ್ನು ಕೋರಿದರು.
ನೆರವಿಗೆ ಕೋರಿಕೆ:
ಕಡು ಬಡತನದಲ್ಲೇ ಬೆಳೆದಿರುವ ಈ ವಿದ್ಯಾರ್ಥಿನಿ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಅಗತ್ಯವಾಗಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಉದ್ಯಮಿಗಳು ಇಂತಹ ಪ್ರತಿಭೆಗೆ ಬೆಂಬಲ ನೀಡಿದಲ್ಲಿ, ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಸಿಗಲಿದೆ. ಆಸಕ್ತರು: ಲಕ್ಷ್ಮೀ ಜಗದೀಶ ವಾಲ್ಮೀಕಿ, ಕೆವಿಜಿ ಗ್ರಾಮೀಣ ಬ್ಯಾಂಕ್: ಖಾತೆ ಸಂಖ್ಯೆ: 89160796765, ಐಎಫ್‌ಎಸ್‌ಸಿ-ಕೆವಿಜಿಬಿ0007001.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.