ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಫೆಬ್ರವರಿಯಲ್ಲಿ ನಡೆದ ಆಲ್ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದು ಕೊಂಡಿದ್ದ ಆಟಗಾರ್ತಿಯರು, ಈಗ ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಹಾಸನ ಜಿಲ್ಲೆಯ ನಾಗಲಾಪುರ ಲಕ್ಷ್ಮೀಯೊಂದಿಗೆ ಕೊಡಗಿನ ದಿಶಾ ನಿಡ್ಯಮಲೆ, ಮನೀಷಾ ಪೆನ್ನಮ್ಮ, ಚಂದನ ತಡಿಯಪ್ಪನ, ಪರ್ಲಿನ್ ಪೆನ್ನಮ್ಮ, ಮೋನಿಕಾ ನಾಣಯ್ಯ, ಪ್ರತೀಕ್ಷಾ, ಅಕ್ಷಿತಾ, ಗಗನಾ ಪುಣ್ಯ ಹಾಗೂ ಇತರರು ತಂಡದಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ. ಕೊಡಗಿನ ಮನೀಷಾ ಪೆನ್ನಮ್ಮ ನಾಯಕಿ ಹಾಗೂ ಪ್ರತೀಕ್ಷಾ ಉಪನಾಯಕಿ, ಉಳಿದಂತೆ ಕರ್ನಾಟಕ ತಂಡದಲ್ಲಿ ಲಕ್ಷ್ಮೀ, ಹರ್ಷಿತಾ, ದೀಪಿಕಾ, ನೇಹಾ, ಋಷಾಶ್ರೀ, ಲಿಪ್ಪಿಕಾ, ಮೆಹರ್, ವೈಷ್ಣವಿ ಹಾಗೂ ಪ್ರೀತಿಕಾ ಸ್ಥಾನ ಪಡೆದುಕೊಂಡಿದ್ದಾರೆ.
ಬಿ ಪೂಲ್‍ನಲ್ಲಿರುವ ಕರ್ನಾಟಕ ತಂಡವನ್ನು ಎ ಪೂಲ್‍ಗೆ ಅರ್ಹತೆ ಗಿಟ್ಟಿಸುವ ಮಹತ್ವದ ಗುರಿಯನ್ನು ತಂಡ ಹೊಂದಿದೆ. ಆಲ್ ಇಂಡಿಯಾ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದಿರುವ ಜೋಶ್‍ನಲ್ಲಿ ಆಟಗಾರ್ತಿಯರು ಪುಣೆಯಲ್ಲೂ ಅದೇ ಉತ್ಸಾಹ ಮತ್ತು ಲಯದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಮುಖ್ಯವಾಗಿ ಭಾರತೀಯ ಜೂನಿಯರ್ ಹಾಕಿ ತಂಡದ ಆಯ್ಕೆ ಪ್ರಕ್ರಿಯೆಯೂ ನಡೆಯಲಿರುವುದರಿಂದ ಕರ್ನಾಟಕದ ಆಟಗಾರ್ತಿಯರ ಪಾಲಿಗೆ ಈ ಪಂದ್ಯಾವಳಿ ಮಹತ್ವದ್ದಾಗಿದೆ. ಈ ಬಾರಿಯ ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‍ಶಿಪ್‍ನಲ್ಲೂ ಮನೀಷಾ ಪೆನ್ನಮ್ಮ ನಾಯಕತ್ವದಲ್ಲಿ ಜಿಲ್ಲೆಯ ಆಟಗಾರ್ತಿ ಲಕ್ಷ್ಮೀ ಹಾಗೂ ತಂಡ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಲಿ ಎಂದು ಕ್ರೀಡಾಭಿಮಾನಿಗಳು ಹಾಗೂ ಸ್ಥಳೀಯರು ಶುಭಹಾರೈಸಿದ್ದಾರೆ.