ಚನ್ನಪಟ್ಟಣ: ಅಯ್ಯನಗುಡಿ ಜಾತ್ರೆ ಎಂದೇ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆ ಮತ್ತು ಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ದೇವಾಲಯವನ್ನು ಒಂದು ಸುತ್ತು ಪ್ರದಕ್ಷಣೆ ಹಾಕಿದ ರಥೋತ್ಸವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ದೇವಸ್ಥಾನದ ಸ್ವಸ್ಥಾನಕ್ಕೆ ಬಂದು ತಲುಪಿತು. ಇದೇ ಸಂದರ್ಭದಲ್ಲಿ ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿಭಾವ ಮೆರೆದರು.
ರಥೋತ್ಸವಕ್ಕೂ ಮುನ್ನಾ ಗೋಪೂಜೆ, ಗಜ, ಅಶ್ವ ಪೂಜೆ. ಶಾಂತಿ ಹೋಮ ಸೇರಿದಂತೆ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ರಥೋತ್ಸವದ ಬಳಿಕ ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.ವಿಶೇಷ ಅಲಂಕಾರ: ರಥೋತ್ಸವದ ಪ್ರಯುಕ್ತ ಶ್ರೀ ಆಂಜನೇಯಸ್ವಾಮಿ ಮತ್ತು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವರ ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಒಳ ಆವರಣದ ಕಂಬ ಮತ್ತು ಮೇಲ್ಭಾಗವನ್ನು ಹೂವು, ವಿವಿಧ ಹಣ್ಣು ಹಾಗೂ ತರಕಾರಿಗಳಿಂದ ಅಲಂಕರಿಸಲಾಗಿದ್ದು, ಇದು ಭಕ್ತಾಧಿಗಳ ಕಣ್ಮನ ಸೆಳೆಯಿತು. ಹೊರಭಾಗದಲ್ಲೂ ವಿಶೇಷವಾಗಿ ವಿದ್ಯುತ್ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು.
ಬ್ರಹ್ಮ ರಥೋತ್ಸವದಲ್ಲಿ ದೇವಸ್ಥಾನ ಪ್ರಧಾನ ಅರ್ಚಕರಾದ ರವೀಂದ್ರ, ಶರತ್ ಹಾಗೂ ಅರ್ಚಕರು, ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಲಕ್ಷ್ಮಿ ನರಸಿಂಹನ್, ದಿಲೀಪ್‌ಗೌಡ, ಅಬ್ಬೂರು ರಾಮಮೂರ್ತಿ, ಪಾರುಪತ್ತೆದಾರರು, ದೇವಾಲಯದ ಸಿಬ್ಬಂದಿ ಹಾಗೂ ಭಕ್ತರು ಸೇರಿದಂತೆ ಹಲವರು ಭಾಗವಹಿಸಿ ರಥೋತ್ಸವದ ಯಶಸ್ಸಿಗೆ ಕೈಜೋಡಿಸಿದರು. ದೇವಾಲಯದ ಆಡಳಿತ ಮಂಡಳಿಯಿಂದ ಭಕ್ತಾದಿಗಳಿಗೆ ಪ್ರಸಾದ, ನೀರು ಮಜ್ಜಿಗೆ, ಪಾನಕ ವಿತರಿಸಿದರು.
ಪೊಟೋ೧೯ಸಿಪಿಟಿ೫: ಶ್ರೀ ಕೆಂಗಲ್ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.