ಕನ್ನಡಪ್ರಭ ವಾರ್ತೆ ಹಾಸನ
ನಗರದ ವಿವೇಕನಗರದ ಸತ್ಯಮಂಗಲ ಕೆರೆ ಉದ್ಯಾನವನದಲ್ಲಿ ನೂತನವಾಗಿ ಸ್ಥಾಪಿಸಲಾದ ಶ್ರೀ ಉದ್ಭವ ಗಂ ಗಣಪತಿ ಯೋಗ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಂಘಟನೆ ಅಥವಾ ಸಾಮಾಜಿಕ ಕಾರ್ಯ ಯಶಸ್ವಿಯಾಗಬೇಕಾದರೆ ಸಮುದಾಯದ ಸಹಭಾಗಿತ್ವ, ಸಾರ್ವಜನಿಕರ ಸಹಕಾರ ಮತ್ತು ಸಂಘಟಿತ ಪ್ರಯತ್ನ ಅತ್ಯಗತ್ಯ. ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಹಣ ಸಂಪಾದನೆ ಮತ್ತು ಭೌತಿಕ ಸೌಲಭ್ಯಗಳ ಗಳಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ, ಆರೋಗ್ಯವೇ ಜೀವನದ ನಿಜವಾದ ಸಂಪತ್ತು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂಪತ್ತು, ಸೌಲಭ್ಯಗಳು ಎಲ್ಲವೂ ಇದ್ದರೂ ಆರೋಗ್ಯ ಇಲ್ಲದಿದ್ದರೆ ಜೀವನದ ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಬೇಕು. ಯೋಗವನ್ನು ದಿನನಿತ್ಯದ ಜೀವನದ ಭಾಗವಾಗಿಸಿಕೊಂಡರೆ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಆಯುರ್ವೇದ ವೈದ್ಯನಾಗಿ ಯೋಗದ ವೈಜ್ಞಾನಿಕ ಮಹತ್ವವನ್ನು ಅರಿತಿದ್ದೇನೆ. ಭಾರತೀಯ ಪ್ರಾಚೀನ ವೈದ್ಯ ಪದ್ಧತಿ ಮತ್ತು ಯೋಗದ ತತ್ವಗಳು ಸಾವಿರಾರು ವರ್ಷಗಳ ಅನುಭವ ಹಾಗೂ ಜ್ಞಾನವನ್ನು ಒಳಗೊಂಡಿವೆ. ಪತಂಜಲಿ ಮಹರ್ಷಿಗಳು ಯೋಗದ ತತ್ವಗಳನ್ನು ವ್ಯವಸ್ಥಿತವಾಗಿ ವಿವರಿಸುವ ಮೂಲಕ ಮಾನವನ ಜೀವನದಲ್ಲಿ ಯೋಗದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಅವರ ಕೊಡುಗೆ ಇಂದಿಗೂ ಪ್ರಸ್ತುತವಾಗಿದ್ದು, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಆರೋಗ್ಯವೆಂದರೆ ಕೇವಲ ದೈಹಿಕವಾಗಿ ಸದೃಢವಾಗಿರುವುದಷ್ಟೇ ಅಲ್ಲ. ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ಸಮತೋಲನ ಮತ್ತು ಸಾಮಾಜಿಕ ಸಾಮರಸ್ಯವೂ ಸಮಗ್ರ ಆರೋಗ್ಯದ ಪ್ರಮುಖ ಅಂಗಗಳಾಗಿವೆ. ವ್ಯಕ್ತಿಯ ದೇಹ ಆರೋಗ್ಯವಾಗಿದ್ದರೂ ಮನಸ್ಸಿನಲ್ಲಿ ನೆಮ್ಮದಿ ಇಲ್ಲದಿದ್ದರೆ ಸಂಪೂರ್ಣ ಆರೋಗ್ಯ ಸಾಧಿಸಲು ಸಾಧ್ಯವಿಲ್ಲ. ಭಾರತೀಯ ವೈದ್ಯ ಪದ್ಧತಿ ಹಿಂದಿನಿಂದಲೂ ಆರೋಗ್ಯದ ಇಂತಹ ಸಮಗ್ರ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತ ಬಂದಿದೆ ಎಂದು ವಿವರಿಸಿದರು. ನೂತನವಾಗಿ ಆರಂಭಗೊಂಡಿರುವ ಯೋಗ ಕೇಂದ್ರವು ಈ ವಿಚಾರಗಳನ್ನು ಜನರಿಗೆ ತಲುಪಿಸಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಹಾರೈಸಿದರು.ರಾಜ್ಯ ಯಜ್ಞ ಪ್ರಭಾರಿ ಹರಿಹರಪುರ ಶ್ರೀಧರ್ ಮಾತನಾಡಿ, ಯೋಗದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜತೆಗೆ ಜನರನ್ನು ಸಂಘಟಿಸಿ ಜಿಲ್ಲೆಯಾದ್ಯಂತ ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು ಎಂದರು. ಯೋಗದ ಉದ್ದೇಶದೊಂದಿಗೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಯೋಗ ಸಾಧಕರು ಮತ್ತು ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸದ ಸಂಗತಿ. ಸರ್ಕಾರಿ ವ್ಯವಸ್ಥೆಯಿಂದ ಮಾತ್ರ ಸಮಾಜದ ಎಲ್ಲ ಕಾರ್ಯಗಳನ್ನು ನಿರ್ವಹಿಸುವುದು ಸಾಧ್ಯವಿಲ್ಲ. ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಯೋಗಾಭ್ಯಾಸ ಮತ್ತು ಸಕಾರಾತ್ಮಕ ಚಿಂತನೆಗಳು ವ್ಯಕ್ತಿಯ ಆತ್ಮಶಕ್ತಿ, ಆತ್ಮವಿಶ್ವಾಸ ಹಾಗೂ ಚೈತನ್ಯದ ವಿಕಾಸಕ್ಕೆ ಪ್ರೇರಣೆಯಾಗುತ್ತವೆ. ನೂತನ ಯೋಗ ಕೇಂದ್ರದ ಪದಾಧಿಕಾರಿಗಳು ಇದೇ ಉತ್ಸಾಹದಿಂದ ಕಾರ್ಯನಿರ್ವಹಿಸಿ, ಜಿಲ್ಲೆಯ ಜನರಿಗೆ ಯೋಗದ ಪ್ರಯೋಜನಗಳನ್ನು ತಲುಪಿಸಬೇಕು ಎಂದು ಆಶಿಸಿದರು.
==========