ಕನ್ನಡಪ್ರಭ ವಾರ್ತೆ ಮೈಸೂರು
ಯುವಕರು ಎಂದಿಗೂ ತಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಯರನ್ನು ಅವರ ವೃದ್ಧಾಪ್ಯದ ದಿನಗಳಲ್ಲಿ ನಿರ್ಲಕ್ಷಿಸದೆ, ಜತನದಿಂದ ಕಾಪಾಡಬೇಕು. ತಂದೆ ತಾಯಿಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ ಕಿವಿಮಾತು ಹೇಳಿದರು.ನಗರದ ಕಾಳಿದಾಸ ರಸ್ತೆಯ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಬ್ರಹ್ಮಿಭೂತ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಶನ್ ಸೋಮವಾರ ಆಯೋಜಿಸಿದ್ದ ಶ್ರೀ ವಾಸುದೇವ್ ಮಹಾರಾಜರ 86ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ತಂದೆ ತಾಯಿಯರನ್ನು ಅಲಕ್ಷಿಸುತ್ತಿರುವ ವೇಳೆಯಲ್ಲಿ ತಂದೆಯ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು 1982 ರಿಂದಲೂ ಶ್ರೀ ವಾಸುದೇವ್ ಮಹಾರಾಜರ ಒಡನಾಡಿಯಾಗಿದ್ದು, ಅವರ ಆದರ್ಶಗಳಿಂದ ಪ್ರಭಾವಿತಗೊಂಡಿದ್ದೇನೆ. ಅವರ ಪುತ್ಥಳಿಯನ್ನು ಮನೆಯಲ್ಲಿ ಸ್ಥಾಪಿಸಿ ಆ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವ ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರಬಾಬು ಅವರು ಸತ್ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಇದು ಸಮಾಜಕ್ಕೆ ಮಾದರಿ ಎಂದು ಅವರು ಶ್ಲಾಘಿಸಿದರು.ಇದೇ ವೇಳೆ ಹರಿಭಕ್ತ (ಗೀತಾ ಸಾಹಿತ್ಯ), ನಂದಿನಿ ಮೂರ್ತಿ (ಯೋಗ ಚಿಕಿತ್ಸೆ), ಎಚ್.ಎಲ್. ಚೆಲುವರಾಜು (ವೈದ್ಯಕೀಯ ಸಾಹಿತ್ಯ) ಹಾಗೂ ಕೆ.ಬಿ. ಯೋಗಪ್ರಿಯ (ಶಿಕ್ಷಣ) ಅವರಿಗೆ ಶ್ರೀ ವಾಸುದೇವ್ ಮಹಾರಾಜ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಜೀವನದಲ್ಲಿ ಆಧ್ಯಾತ್ಮಿಕತೆ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಅವರು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಮಾಜ ಸೇವಕ ಕೆ. ರಘುರಾಂ, ದತ್ತ ಕ್ರಿಯಾಯೋಗ ಶಿಕ್ಷಕ ಎಂ. ಮೋಹನ್, ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಸಿಇಒ ಕೆ.ಆರ್. ಯೋಗಾನರಸಿಂಹನ್, ದೇವಸ್ಥಾನದ ಅರ್ಚಕರಾದ ವೀರ ರಾಘವನ್, ಬಾಲಾಜಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ವಿ. ನಾಗೇಂದ್ರಬಾಬು, ಸಂಚಾಲಕ ಎನ್. ಅನಂತ ಇದ್ದರು.