ಡಿಸಿ ಕಚೇರಿ ತಡೆಗೋಡೆ ಕಾಮಗಾರಿ ಪರಿಶೀಲಿಸಿದ ಲಮಾಣಿ

KannadaprabhaNewsNetwork |  
Published : Jul 25, 2025, 12:42 AM ISTUpdated : Jul 25, 2025, 12:50 AM IST
ಚಿತ್ರ :  24ಎಂಡಿಕೆ1 :  ಡಿಸಿ ಕಚೇರಿ ತಡೆಗೋಡೆ ಕಾಮಗಾರಿ ವೀಕ್ಷಣೆ  ಮಾಡಿದ  ವಿಧಾನಸಭೆ ಅರ್ಜಿ ಸಮಿತಿ ಪ್ರಮುಖರು.  | Kannada Prabha

ಸಾರಾಂಶ

ವಿಧಾನಸಭೆಯ ಅರ್ಜಿ ಸಮಿತಿ ತಂಡದ ಸದಸ್ಯರಾದ ಎ.ಮಂಜು, ಡಾ.ಮಂತರ್ ಗೌಡ, ಯು.ಬಿ.ಬಣಕಾರ್, ಸಿ.ಎನ್.ಬಾಲಕೃಷ್ಣ, ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ಕೆ.ಸಿ.ಶ್ರೀನಿವಾಸ, ಮಹೇಶ್ ಟೆಂಗಿನಕಾಯಿ, ಎಸ್.ಮುನಿರಾಜು, ಡಾ.ಅವಿನಾಶ್ ಉಮೇಶ್ ಜಾಧವ ಇತರರು ಭೇಟಿ ನೀಡಿ ತಡೆಗೋಡೆ ಪರಿಶೀಲಿಸಿದರು.

ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷ ಹಾಗೂ ತಂಡದಿಂದ ಕೊಡಗು ಭೇಟಿ

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಧಾನಸಭೆಯ ಉಪ ಸಭಾಧ್ಯಕ್ಷ ಹಾಗೂ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಮತ್ತು ವಿಧಾನಸಭೆಯ ಅರ್ಜಿ ಸಮಿತಿ ತಂಡದ ಸದಸ್ಯರು ನಗರದ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಗುರುವಾರ ವೀಕ್ಷಿಸಿದರು.ವಿಧಾನಸಭೆಯ ಅರ್ಜಿ ಸಮಿತಿ ತಂಡದ ಸದಸ್ಯರಾದ ಎ.ಮಂಜು, ಡಾ.ಮಂತರ್ ಗೌಡ, ಯು.ಬಿ.ಬಣಕಾರ್, ಸಿ.ಎನ್.ಬಾಲಕೃಷ್ಣ, ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ಕೆ.ಸಿ.ಶ್ರೀನಿವಾಸ, ಮಹೇಶ್ ಟೆಂಗಿನಕಾಯಿ, ಎಸ್.ಮುನಿರಾಜು, ಡಾ.ಅವಿನಾಶ್ ಉಮೇಶ್ ಜಾಧವ ಇತರರು ಭೇಟಿ ನೀಡಿ ತಡೆಗೋಡೆ ಪರಿಶೀಲಿಸಿದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ ಇತರರು ಇದ್ದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಹಾಗೂ ಶಾಸಕ ಡಾ.ಮಂತರ್ ಗೌಡ, ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.ಹೊಸ ತಂತ್ರಜ್ಞಾನ ಮೂಲಕ ಕಾಮಗಾರಿ: ಲಮಾಣಿ

ಈ ಸಂದರ್ಭ ಮಾತನಾಡಿದ ವಿಧಾನಸಭೆಯ ಉಪ ಸಭಾಧ್ಯಕ್ಷ ಹಾಗೂ ಅರ್ಜಿ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಸ್ತೆ ಹಾಗೂ ತಡೆಗೋಡೆ ಭದ್ರವಾಗಿ ನಿಲ್ಲುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಮೂಲಕ ಕಾಮಗಾರಿ ಕೈಗೊಂಡು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಮಂಜಪ್ಪ, ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ತಜ್ಞರ ಸಲಹೆಯಂತೆ ಆರ್‌ಇ ವಾಲ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಮಾರ್ಗ ಆಗಿರುವುದರಿಂದ ಮೇಲಿನ ಸರ್ಪೇಜ್ ವಾಟರ್ ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ರಸ್ತೆ ಮತ್ತು ತಡೆಗೋಡೆಗೆ ಯಾವುದೇ ರೀತಿ ಧಕ್ಕೆಯಾಗದಂತೆ ಆರ್‌ಇ ವಾಲ್ ನಿರ್ಮಿಸಲಾಗಿದೆ. ಎರಡನೇ ಹಂತದ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಚರಂಡಿ ನೀರು ಸಹ ನಿಲ್ಲದೆ ತಡೆಗೋಡೆ ಹಾಗೂ ರಸ್ತೆಗೆ ಯಾವುದೇ ರೀತಿ ಅಡಚಣೆ ಉಂಟಾಗದಂತೆ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ ಎಂದರು.ದಸರಾ ವೇಳೆಗೆ ಕಾಮಗಾರಿ ಪೂರ್ಣಕ್ಕೆ ಸೂಚನೆ: ಮಂತರ್‌ ಗೌಡ

ಜಿಲ್ಲಾಡಳಿತ ಭವನ ನಿರ್ಮಾಣ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದವರ ಗಮನಕ್ಕೆ ತರಬೇಕಿತ್ತು, ಆ ನಿಟ್ಟಿನಲ್ಲಿ ತಡೆಗೋಡೆ ಸುರಕ್ಷತೆಗೆ ಒತ್ತು ನೀಡಿ ಅರ್ಜಿ ಸಮಿತಿಗೆ ಮನವಿ ಮಾಡಲಾಗಿತ್ತು. 2024ರ ಮಾರ್ಚ್ ತಿಂಗಳಲ್ಲಿ ಅರ್ಜಿ ಸಮಿತಿ ಸದಸ್ಯರ ತಂಡವು ಆಗಮಿಸಿತ್ತು. ಈಗ ಸಮಿತಿಯ ಅಧ್ಯಕ್ಷರ ನೇತೃತ್ವದ ತಂಡ ಆಗಮಿಸಿ ವೀಕ್ಷಿಸಿದೆ. ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದು ಶಾಸಕ ಮಂತರ್‌ ಗೌಡ ಹೇಳಿದರು.ಈ ಸಂದರ್ಭ ಮಾತನಾಡಿದ ಸಮಿತಿ ಸದಸ್ಯ ರಮೇಶ್ ಕುಮಾರ್, ಅರ್ಜಿ ಸಮಿತಿಗೆ ಈ ಬಗ್ಗೆ ಮಾಹಿತಿ ಬರದಿದ್ದರೆ ಹೇಗೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ನ್ನು ಪ್ರಶ್ನಿಸಿದರು.ರುದ್ರಪ್ಪ ಲಮಾಣಿ ಮಾತನಾಡಿ, ಲೋಪವನ್ನು ಸರಿಪಡಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುವುದರಿಂದ ರಸ್ತೆ ಹಾಗೂ ತಡೆಗೋಡೆ ಸುರಕ್ಷತೆಗೆ ಆದಷ್ಟು ಒತ್ತು ನೀಡಬೇಕಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಈ ಸಂದರ್ಭ ಮಾತನಾಡಿದ ಸಮಿತಿ ಸದಸ್ಯ ಎ.ಮಂಜು, ಕಾಮಗಾರಿ ಆರಂಭದಲ್ಲಿ ಮಲೆನಾಡು ಭಾಗಕ್ಕೆ ಯಾವ ರೀತಿಯ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುವುದು ಎಂಜಿನಿಯರ್‌ಗಳು ಯೋಚಿಸಬೇಕು. ಅದನ್ನು ಬಿಟ್ಟು ಸಣ್ಣ ಎಂಜಿನಿಯರ್‌ಗಳನ್ನು ಬಲಿಪಶುಮಾಡಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ಈ ಕಾಮಗಾರಿ ಒಂದು ರೀತಿ ಲೋಕೋಪಯೋಗಿ ಇಲಾಖೆಯವರಿಗೆ ಪಾಠವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬುದ್ಧರಾಗಬೇಕು ಎಂದು ಸಲಹೆ ಮಾಡಿದರು.ಮತ್ತೊಬ್ಬ ಸದಸ್ಯ ಸಿ.ಎನ್.ಬಾಲಕೃಷ್ಣ ಮಾತನಾಡಿ, ಇಂತಹ ಕೆಲಸಗಳು ಮತ್ತೆ ಮತ್ತೆ ಮರುಕಳಿಸಬಾರದು. ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು ಎಂದು ಸೂಚಿಸಿದರು.ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ ಕಾಮಗಾರಿ ಸಂಬಂಧ ಸುದೀರ್ಘವಾಗಿ ಮಾಹಿತಿ ನೀಡಿದರು. ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಜಯ್‌ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ