ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸದರಿ ಯೋಜನಾ ಭಾಗದ ರೈತರೊಂದಿಗೆ ಸಭೆ ನಡೆಸಿದ ಅವರು, ಕಾಮಗಾರಿಯ ಉದ್ದೇಶ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರಿಗೆ ದೊರೆಯಲಿರುವ ಪರಿಹಾರದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ರೈತರ ಅಹವಾಲುಗಳು ಹಾಗೂ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು.
ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ ಹಾಗೂ ಯಶವಂತಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶದ ಕಾಮಗಾರಿಗೆ ಅಗತ್ಯವಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸರ್ಕಾರದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬಂಧಪಟ್ಟ ರೈತರ ಜಮೀನು, ದಾಖಲೆಗಳು ಹಾಗೂ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.
ಭಕ್ತರಹಳ್ಳಿ ಗ್ರಾಮದ ಬಳಿ ಜಮೀನಿನ ಸರ್ಕಾರಿ ಮಾರ್ಗಸೂಚಿ ಮೌಲ್ಯ (ಎಸ್‌ಆರ್ ಮೌಲ್ಯ) ಗುಂಟೆಗೆ ಸುಮಾರು ₹15 ಸಾವಿರ ಇದ್ದು, ಅದರ ನಾಲ್ಕು ಪಟ್ಟು ಲೆಕ್ಕದಲ್ಲಿ ಸುಮಾರು ₹63,400ರಷ್ಟು ಪರಿಹಾರ ಧನ ದೊರೆಯಲಿದೆ. ಅದೇ ರೀತಿ ಯಶವಂತಪುರದ ಬಳಿ ಗುಂಟೆಗೆ ಸುಮಾರು ₹51,500 ಪರಿಹಾರ ನಿಗದಿಯಾಗಿರುವುದನ್ನು ಅವರು ರೈತರ ಗಮನಕ್ಕೆ ತಂದರು.
ರೈತರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ ಜಿ.ಪ್ರಭು ಅವರು, ರೈತರು ತಿಳಿಸಿರುವ ಜಮೀನಿನ ಮಾರುಕಟ್ಟೆ ಮೌಲ್ಯ ಸೇರಿದಂತೆ ಸಂಬಂಧಪಟ್ಟ ಅಂಶಗಳನ್ನು ಪರಿಶೀಲಿಸಲಾಗುವುದು. ಸರ್ಕಾರದ ನಿಯಮಗಳು ಹಾಗೂ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಉಪವಿಭಾಗಾಧಿಕಾರಿ ಅಶ್ವಿನ್, ಚಿಂತಾಮಣಿ ತಹಸೀಲ್ದಾರ್ ಸುದರ್ಶನ್ ಯಾದವ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ರೈತರು ಇದ್ದರು.