ಜಲ್ಲಾಪುರ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟ: ನಾಯಿ ಸಾವು

KannadaprabhaNewsNetwork |  
Published : Apr 05, 2025, 12:46 AM IST
ಘಟನಾ ಸ್ಥಳಕ್ಕೆ ಸಿಪಿಐ ಆನಂದ ಒನಕುದ್ರೆ, ಅಪರಾಧ ಸ್ಥಳ ಪರೀಕ್ಷಾ ತಜ್ಞ ದಯಾನಂದ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿತು. | Kannada Prabha

ಸಾರಾಂಶ

ನಾಯಿಯೊಂದು ನಾಡ ಬಾಂಬ್‌ನ್ನು ಬಾಯಿಯಲ್ಲಿ ಕಚ್ಚಿದ್ದರಿಂದ ಕೂಡಲೇ ಬಾಂಬ್ ಸ್ಫೋಟಗೊಂಡ ಪರಿಣಾಮ ಅದರ ಮುಖ ಛಿದ್ರಗೊಂಡು ಸ್ಥಳದಲ್ಲೇ ಅಸುನೀಗಿದೆ.

ಸವಣೂರು: ಜಮೀನಿನಲ್ಲಿ ಅನಧಿಕೃತವಾಗಿ ಇಟ್ಟಿದ್ದ ನಾಡಬಾಂಬ್‌ನ್ನು ನಾಯಿ ಕಚ್ಚಿದ ಪರಿಣಾಮ ಸ್ಫೋಟಗೊಂಡು ಶ್ವಾನ ಅಸುನೀಗಿದ ಘಟನೆ ತಾಲೂಕಿನ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಜಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಲ್ಲನಗೌಡ ಪಾಟೀಲ ಎಂಬವರ ಹೊಲದಲ್ಲಿ ಮಂಗಳವಾರ ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ ಅನಧಿಕೃತವಾಗಿ ನಾಡ ಬಾಂಬ್‌ಗಳಿಗೆ ಪ್ರಾಣಿಯ ಕೊಬ್ಬನ್ನು ಸವರಿ ಇಡಲಾಗಿತ್ತು. ನಾಯಿಯೊಂದು ನಾಡ ಬಾಂಬ್‌ನ್ನು ಬಾಯಿಯಲ್ಲಿ ಕಚ್ಚಿದ್ದರಿಂದ ಕೂಡಲೇ ಬಾಂಬ್ ಸ್ಫೋಟಗೊಂಡ ಪರಿಣಾಮ ಅದರ ಮುಖ ಛಿದ್ರಗೊಂಡು ಸ್ಥಳದಲ್ಲೇ ಅಸುನೀಗಿದೆ. ಇನ್ನೂ ಎರಡು ಜೀವಂತ ನಾಡಬಾಂಬ್‌ಗಳು ಅದೇ ಸ್ಥಳದಲ್ಲಿ ದೊರಕಿವೆ.

ಘಟನೆ ಕುರಿತು ಮಹದೇವಪ್ಪ ಬಸಲಿಂಗಪ್ಪ ಸವಣೂರ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ. ಸ್ಥಳಕ್ಕೆ ಸವಣೂರು ಪೊಲೀಸ್ ಠಾಣೆ ಸಿಪಿಐ ಆನಂದ ಒನಕುದ್ರೆ, ಅಪರಾಧ ಸ್ಥಳ ಪರೀಕ್ಷಾ ತಜ್ಞರಾದ ದಯಾನಂದ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

ಸವಣೂರು: ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಉದ್ಭವ ಮೂರ್ತಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯ ಏ. 5ರಿಂದ ಏ. 8ರ ವರೆಗೆ ಜರುಗಲಿದೆ.

ಏ. 5ರಂದು ಪ್ರಾಥಃಕಾಲ ವೀರಭದ್ರೇಶ್ವರ ದೇವರ ಮೂರ್ತಿಗೆ ರುದ್ರಾಬೀಷೇಕ, ಸಂಜೆ ಕಳಸಾರೋಹಣ, ನಂತರ, ಹೂವಿನ ರಥೋತ್ಸವ ಹಾಗೂ ಅನ್ನಪ್ರಸಾದ ಜರುಗಲಿದೆ. ಏ. 6ರಂದು ಅಭಿಷೇಕ, ಸಂಜೆ ದೊಡ್ಡರಥಕ್ಕೆ ಗ್ರಾಮಸ್ಥರಿಂದ ಎಡೆ ಕೊಡುವುದು. ನಂತರ, ಬೀರಲಿಂಗೇಶ್ವರ ಡೊಳ್ಳಿನ ಮೇಳದವರಿಂದ ಡೊಳ್ಳಿನ ಪದಗಳು ಜರುಗಲಿವೆ.ಏ. 7ರಂದು ಪ್ರಾಥಃಕಾಲ ದೇವರಿಗೆ ಅಭಿಷೇಕ, ವೀರಭದ್ರೇಶ್ವರ ಪುರವಂತಿಕೆ ಕಲಾ ತಂಡದ ಪುರವಂತ ಸಂಗಮೇಶ್ವರ ಪರಶೆಟ್ಟಿ ಹಾಗೂ ಸದಸ್ಯರಿಂದ ಗುಗ್ಗಳ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ಡೊಳ್ಳಿನ ಮೇಳ, ಭಜಂತ್ರಿ ಮೇಳದೊಂದಿಗೆ ನಡೆಯಲಿದೆ.ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಯಾಸೀರಖಾನ್ ಪಠಾಣ, ಹೆಸ್ಕಾಂ ಮಂಡಳಿ ಅಧ್ಯಕ್ಷ ಅಜೀಮಪೀರ್ ಖಾದ್ರಿ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬಿಜೆಪಿ ಪ್ರಮುಖ ಭರತ ಬೊಮ್ಮಾಯಿ, ಹಾವೇರಿ ಹಾಲು ಒಕ್ಕೂಟ ನಿರ್ದೇಶಕ ಶಶಿಧರ ಯಲಿಗಾರ, ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ಹಾಗೂ ಇತರರು ಪಾಲ್ಗೊಳ್ಳುವರು.ಏ. 8ರಂದು ಪ್ರಾಥಃಕಾಲ ರುದ್ರಾಭಿಷೇಕ, ಸಂಜೆ ಕಡುಬಿನಕಾಳಗ ನಡೆಯಲಿದೆ. ನಂತರ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಓಕುಳಿ ಬಂಡಿ ಮೆರವಣಿಗೆ ನಡೆಯಲಿದೆ ಎಂದು ಜಾತ್ರಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ