ನಾಡಬಾಂಬ್ ಸ್ಫೋಟ; ಅಕ್ಕಪಕ್ಕದ ಮನೆಗಳು ಛಿದ್ರ

KannadaprabhaNewsNetwork |  
Published : Jun 23, 2026, 02:30 AM IST
ನಾಡಬಾಂಬು ಸ್ಫೋಟಕ್ಕೆ ದ್ವಂಸಗೊಂಡ ಮನೆ. | Kannada Prabha

ಸಾರಾಂಶ

ತಾಲೂಕಿನ ಪೀಶೆಲಿಂಗೇಶ್ವರ ದೇವರ ಪುಣ್ಯ ಕ್ಷೇತ್ರವೆಂದು ಗುರುತಿಸಲ್ಪಡುವ ಸಾಂಬ್ರಾಣಿ ಹೋಬಳಿ ವ್ಯಾಪ್ತಿಯ ಕಾಳಗಿನಕೊಪ್ಪ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಆಕಸ್ಮಿಕವಾಗಿ ನಾಡಬಾಂಬು ಸ್ಫೋಟಗೊಂಡ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ತಾಲೂಕಿನ ಪೀಶೆಲಿಂಗೇಶ್ವರ ದೇವರ ಪುಣ್ಯ ಕ್ಷೇತ್ರವೆಂದು ಗುರುತಿಸಲ್ಪಡುವ ಸಾಂಬ್ರಾಣಿ ಹೋಬಳಿ ವ್ಯಾಪ್ತಿಯ ಕಾಳಗಿನಕೊಪ್ಪ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಆಕಸ್ಮಿಕವಾಗಿ ನಾಡಬಾಂಬು ಸ್ಫೋಟಗೊಂಡ ಘಟನೆ ನಡೆದಿದೆ.

ಸ್ಫೋಟದ ತೀವ್ರತೆಗೆ ಬಾಂಬ್ ಅಕ್ರಮವಾಗಿ ದಾಸ್ತಾನು ಮಾಡಿಟ್ಟ ಹಳೆಯ ಮನೆಯು ಸಂಪೂರ್ಣವಾಗಿ ಛಿದ್ರಗೊಂಡಿದ್ದರೆ, ಅಕ್ಕಪಕ್ಕ ಹಾಗೂ ಮುಂದಿನ ಮತ್ತು ಹಿಂದಿನ ಮನೆಗಳೂ ಜಖಂಗೊಂಡಿವೆ.

ಬೆಳ್ಳಂಬೆಳಗ್ಗೆ ಸ್ಫೋಟದ ಸದ್ದಿಗೆ ಭೂಕಂಪ ಸಂಭವಿಸಿರಬಹುದೆಂದು ಊಹಿಸಿದ ಗ್ರಾಮಸ್ಥರು, ತಡಬಡಾಯಿಸಿಕೊಂಡು ಮನೆಯ ಹೊರಗೆ ಓಡೋಡಿ ಬಂದಿದ್ದು, ಸ್ಫೋಟದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಒಂದಾನುವೇಳೆ ಇದೇ ಘಟನೆ ಹಗಲಿನಲ್ಲಿ ಸಂಭವಿಸಿದ್ದರೇ ಬಾರಿ ಸಾವು-ನೋವು ಸಂಭವಿಸುತ್ತೆಂದು ನಿಟ್ಟುಸಿರು ಬಿಡುತ್ತಿದ್ದಾರೆ.

ಘಟನೆಗೆ ಕಾರಣನಾದ ವಸಂತ (ವಾಸು) ರಾಯಪ್ಪ ಕೊರವರ (52), ಮುನೇಶ್ವರ ವಸಂತ ಕೊರವರ ಪರಾರಿಯಾಗಿದ್ದಾರೆ. ಈ ಘಟನೆಯ ಕುರಿತು ಹಳಿಯಾಳ ಠಾಣೆಯಲ್ಲಿ ಆರೋಪಿಯ ನೆರೆಮನೆಯ ನಿವಾಸಿ ಮಾರುತಿ ಅಪ್ಪಯ್ಯ ಬಿಡದೊಳಕರ ದೂರನ್ನು ದಾಖಲಿಸಿದ್ದಾರೆ.

ಬಾಂಬ್ ಸ್ಫೋಟಗೊಂಡ ಹಳೆಯ ಮನೆಯು ಆರೋಪಿ ವಸಂತ ಕೊರವರಗೆ ಸೇರಿದ್ದು, ಅದರ ಪಕ್ಕದ ಮನೆಯಲ್ಲಿಯೇ ವಸಂತ ವಾಸಿಸುತ್ತಿದ್ದ. ಕಾಡುಹಂದಿ ಸೇರಿ ವನ್ಯಪ್ರಾಣಿಗಳ ಬೇಟೆಗಾಗಿ ಈ ನಾಡಬಾಂಬುಗಳನ್ನು ಪಾಳುಬಿದ್ದಂತಹ ಹಳೆಯ ಮನೆಯಲ್ಲಿ ಅಕ್ರಮವಾಗಿ ಇಡಲಾಗಿತ್ತು. ಸ್ಥಳದಲ್ಲಿ ನೂರಕ್ಕೂ ಹೆಚ್ಚು ಕಚ್ಚಾ ಬಾಂಬುಗಳು ಇದ್ದಿರಬಹುದೆಂದು ಶಂಕಿಸಲಾಗುತ್ತಿದೆ. ಸ್ಫೋಟಗೊಳ್ಳದೇ ಇದ್ದಂತಹ ನಾಡಬಾಂಬುಗಳನ್ನು ಸಂಗ್ರಹಿಸಿ ಆರೋಪಿಯು ಪರಾರಿಯಾಗಿದ್ದು, ಹೀಗೆ ಪರಾರಿಯಾಗುವಾಗ ಸಮೀಪದ ಕೆರೆಯಲ್ಲಿ ಒಗೆದು ಹೋಗಿರಬಹುದೆಂದು ಗ್ರಾಮಸ್ಥರು ಶಂಕಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ದೀಪನ್ ಎಂ.ಎನ್., ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಹಳಿಯಾಳ ಸಿಪಿಐ ಜಯಪಾಲ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ವಿಧ್ವಂಸಕ ಕೃತ್ಯ ತಪಾಸಣಾ ತಂಡ ಹಾಗೂ ಶ್ವಾನದಳದ ತಂಡವು ನಾಡಬಾಂಬು ಸ್ಫೋಟಿಸಿದ ಮನೆಯ ಪರಿಶೀಲನೆ ನಡೆಸಿತು.

ಕಾಳಗಿನಕೊಪ್ಪದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸ್ ಸಹಾಯವಾಣಿಗೆ ಕರೆ ಬಂದಿದೆ. ತಕ್ಷಣ ಸ್ಥಳೀಯ ಠಾಣೆಯವರು ಭೇಟಿ ನೀಡಿದ್ದಾರೆ. ಘಟನೆಯ ಪರಿಶೀಲನೆಗೆ ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್ ಗ್ರಾಮಕ್ಕೆ ಬಂದಿಳಿದಿದ್ದು ತನಿಖೆ ಆರಂಭಿಸಿದೆ. ಪ್ರಕರಣ ದಾಖಲಿಸಿಕೊಂಡು ನಾವು ತನಿಖೆ ಕೈಗೊಳ್ಳಲಿದ್ದೇವೆ ಎಂದು ಎಸ್ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾನ್ಕುಳಿಯಲ್ಲಿ ಗೋವು-ಮಣ್ಣು-ಅಡಕೆ ಮಾಹಿತಿ ಶಿಬಿರ
ಪೊಲೀಸರಿಗೆ ಸವಾಲಾಗಿದ್ದ ಮಚ್ಚ ಮಂಜ ಸೆರೆ