ಜಮೀನು ವಿವಾದ: ದಲಿತರ ಮೇಲೆ ಸವರ್ಣೀಯರ ಹಲ್ಲೆ

KannadaprabhaNewsNetwork | Published : Jun 15, 2024 1:02 AM

ಸಾರಾಂಶ

ಹೊಸಕೋಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ವಿಚಾರವಾಗಿ ಸವರ್ಣೀಯರಿಂದ ದಲಿತ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ದಲಿತರ ಜಮೀನಿನಲ್ಲಿದ್ದ ತೆಂಗಿನ ಗಿಡ ಹಾಗೂ ಸರ್ಕಾರಿ ಜಾಗದಲ್ಲಿದ್ದ ಅಂಬೇಡ್ಕರ್ ಭಾವಚಿತ್ರ ಕಿತ್ತುಹಾಕಿರುವ ಘಟನೆ ನಡೆದಿದೆ.

ಹೊಸಕೋಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ವಿಚಾರವಾಗಿ ಸವರ್ಣೀಯರಿಂದ ದಲಿತ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ದಲಿತರ ಜಮೀನಿನಲ್ಲಿದ್ದ ತೆಂಗಿನ ಗಿಡ ಹಾಗೂ ಸರ್ಕಾರಿ ಜಾಗದಲ್ಲಿದ್ದ ಅಂಬೇಡ್ಕರ್ ಭಾವಚಿತ್ರ ಕಿತ್ತುಹಾಕಿರುವ ಘಟನೆ ನಡೆದಿದೆ.

ಬೇಗೂರು ಗ್ರಾಮದ ದಲಿತ ಸಮುದಾಯದ ಗಂಗಲಕ್ಷ್ಮೀ - ಮುನಿರಾಜು ದಂಪತಿ ಹಲ್ಲೆಗೊಳಗಾದವರು. ಸವರ್ಣೀಯರಾದ ಭೀಮಣ್ಣ, ಶೀನಿವಾಸ್, ಗೋವಿಂದರಾಜ್, ವೆಂಕಟೇಶ್, ಸರೋಜಮ್ಮ, ಶೋಭ, ಶಿವಣ್ಣ ತಂಡ ಹಲ್ಲೆ ಮಾಡಿದ್ದು, ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಲಿತ ಸಮುದಾಯದ ಗಂಗಲಕ್ಷ್ಮೀ - ಮುನಿರಾಜು ದಂಪತಿ ೧ ಎಕರೆ ೨ ಗುಂಟೆ ಜಮೀನಿನಲ್ಲಿ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಮತ್ತು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಜಮೀನಿನ ಸುತ್ತ ತೆಂಗಿನ ಗಿಡ ಹಾಕಿದ್ದಾರೆ. ಆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ವಿಫಲವಾಗಿತ್ತು. ಗಂಗಲಕ್ಷ್ಮೀ ಅವರ ಜಮೀನಿನ ಪಕ್ಕದಲ್ಲಿರುವ ಸರ್ವೆ ನಂ. ೧೪೧ರಲ್ಲಿ ೨ ಎಕರೆ ಸರ್ಕಾರಿ ಗೋಮಾಳವಿದ್ದು ಅದರಲ್ಲಿ ೨೨ ಗುಂಟೆ ಸರ್ಕಾರಿ ಜಾಗದಲ್ಲಿರುವ ಕುಂಟೆಯಲ್ಲಿನ ನೀರು ಬಳಸಿಕೊಂಡು ತೆಂಗಿನ ಸಸಿ ಬೆಳೆಸುತ್ತಿರುವುದಲ್ಲದೆ ಮಂಜೂರಾತಿಗಾಗಿ ಫಾರಂನA57 ಅರ್ಜಿ ಸಹ ಹಾಕಿದ್ದಾರೆ ಎನ್ನಲಾಗಿದೆ.

ಇದೆ 22 ಗುಂಟೆ ಜಮೀನನ್ನು ಸವರ್ಣೀಯರು ಒತ್ತುವರಿ ಮಾಡಿಕೊಂಡಿದ್ದು ಇದನ್ನು ಪ್ರಶ್ನಿಸಿ ತಹಸೀಲ್ದಾರ್ ಅವರಿಗೆ ತೆರವು ಮಾಡಿಸುವಂತೆ ದಲಿತ ಸಮುದಾಯದ ಗಂಗಲಕ್ಷ್ಮೀ- ಮುನಿರಾಜು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಬಳಿಕ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್ ಭಾವಚಿತ್ರ ನೆಟ್ಟು, 22 ಗುಂಟೆ ಸರ್ಕಾರಿ ಜಾಗ ತೆರವು ಮಾಡಿಸಿಕೊಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಈ ವಿಚಾರವಾಗಿ ಗಂಗಲಕ್ಷ್ಮಿ-ಮುನಿರಾಜು ಅಂಬೇಡ್ಕರ್ ಫೋಟೋ ನೆಟ್ಟ ಹಿನ್ನೆಲೆ ಭೀಮಣ್ಣ ಸೇರಿದಂತೆ ಕುಟುಂಬದ ಸದಸ್ಯರು ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಭೀಮ್ ಸೇವಾ ಸಮಿತಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಸ್ಥಳಕ್ಕಾಗಮಿಸಿ ಹಲ್ಲೆಗೊಳಗಾದ ದಲಿತ ಕುಟುಂಬದ ಬೆನ್ನಿಗೆ ನಿಂತು ಸೂಲಿಬೆಲೆ ಠಾಣೆಯಲ್ಲಿ ದೂರು ದಾಖಲಿಸಿ ಹಲ್ಲೆ ಆರೋಪಿಗಳನ್ನು ಬಂಧಿಸಿ ಕಾನುನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.ಫೋಟೋ: 14 ಹೆಚ್‌ಎಸ್‌ಕೆ 1, 2, 3

ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿರುವ ಸವರ್ಣೀಯರು.

Share this article