ಭೂಸುರಕ್ಷಾ ಯೋಜನೆಗೆ ಚಾಲನೆ । ದಾಖಲೆಗಳ ತಿದ್ದುಪಡಿ, ಕಳವು ಅಸಾಧ್ಯ
ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಶಾಶ್ವತ ಡಿಜಿ ದಾಖಲೆಗಳಾಗಿ ಪರವರ್ತಿಸಿ, ಜನರ ಅನುಕೂಲಕ್ಕೆ ಅಗತ್ಯಗನುಗುಣವಾಗಿ ಒದಗಿಸಲು ಭೂ ಸುರಕ್ಷಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ತಹಸೀಲ್ದಾರರ ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಗೆ ಶನಿವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಾಖಲೆಗಳಿಗಾಗಿ ಬರುವ ಆಸ್ತಿಗಳ ಮಾಲೀಕರು ಸಂಬಂಧಿಸಿದ ಇಲಾಖೆಗಳ ದಾಖಲೆಗಳ ಸಂಗ್ರಹಾಲಯದಿಂದ ಪಡೆದುಕೊಳ್ಳಲು ಇರುವ ತೊಂದರೆ ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದ ನಿವಾರಣೆಗೊಳ್ಳಲಿದೆ. ಹಳೆಯ ದಾಖಲೆಗಳ ಸಂರಕ್ಷಣೆಯಿಂದಾಗಿ ದಾಖಲೆಗಳ ತಿದ್ದುಪಡಿ, ಕಳವು ಅಸಾಧ್ಯವಾಗಲಿದೆ ಎಂದರು.ಆಸಕ್ತ ಭೂಮಿಯ ಮಾಲೀಕರು ತಮ್ಮ ಭೂದಾಖಲೆಗಳನ್ನು ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇಂತಹ ಮಹತ್ವದ ಯೋಜನೆಯಡಿ ಜನಸಾಮಾನ್ಯರಿಗೆ ಯಾವುದೇ ಮದ್ಯವರ್ತಿಗಳಿಲ್ಲದೆ, ಕಚೇರಿಗಳಿಗೆ ಅಲೆದಾಟವಿಲ್ಲದೇ, ವಿಳಂಬಕ್ಕೆ, ಅಡೆತಡೆಗೆ ಅವಕಾಶವಿಲ್ಲದೇ ಭೂಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ತ್ವರಿತವಾಗಿ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಆಡಳಿತಕ್ಕೆ ಡಿ.ಜಿ.ಸ್ಪರ್ಶ ನೀಡುವುದರಿಂದ ಉತ್ತಮ ಜನಪರ ಆಡಳಿತ ನೀಡಲಾಗುತ್ತಿದೆ ಅಲ್ಲದೇ ಭೂಮಾಲೀಕರ ಒಡೆತನಕ್ಕೆ ಗ್ಯಾರಂಟಿ ನೀಡಲಾಗುತ್ತಿದೆ ಎಂದು ಹೇಳಿದರು.
ಭವಿಷ್ಯದ ದಿನಗಳಲ್ಲಿ ವಿವಿಧ ಇಲಾಖಾ ವಿಭಾಗಗಳ ಡಿಜಿಟಲೀಕರಣಕ್ಕೂ ಈ ಯೋಜನೆಯು ನೆರವಿಗೆ ಬರುವ ನಿರೀಕ್ಷೆ ಇದೆ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ರಾಜ್ಯದ ಎಲ್ಲಾ ತಾಲೂಕು ಕಚೇರಿ, ಸರ್ವೆ ಕಚೇರಿ ಮತ್ತು ಉಪನೋಂದಣಾಧಿಕಾರಿಗಳಲ್ಲಿರುವ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.