ವೈಜ್ಞಾನಿಕ ಬೆಲೆ ನೀಡದಿದ್ದರೆ ಭೂಮಿ ಕೊಡಲ್ಲ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾದೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಅವೈಜ್ಞಾನಿಕ ಬೆಲೆ ನಿಗದಿ ಹಾಗೂ ಅಧಿಕಾರಿಗಳ ರೈತ ವಿರೋಧಿ ಧೋರಣೆ ವಿರುದ್ದ ಆಕ್ರೋಶ ತಾರಕಕ್ಕೇರಿದ್ದು, ಮಂಗಳವಾರ ಇಲ್ಲಿನ ರಘುನಾಥಪುರ ಸಮೀಪ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾದೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಅವೈಜ್ಞಾನಿಕ ಬೆಲೆ ನಿಗದಿ ಹಾಗೂ ಅಧಿಕಾರಿಗಳ ರೈತ ವಿರೋಧಿ ಧೋರಣೆ ವಿರುದ್ದ ಆಕ್ರೋಶ ತಾರಕಕ್ಕೇರಿದ್ದು, ಮಂಗಳವಾರ ಇಲ್ಲಿನ ರಘುನಾಥಪುರ ಸಮೀಪ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಸ್ಥಳೀಯ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರ ಸರ್ಕಾರ ಮಾಡಿರುವ ಕಾನೂನುಗಳನ್ನು ಬದಿಗೊತ್ತಿರುವ ಅಧಿಕಾರಿಗಳು ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಿಗೆ ಸೇರಿರುವ 970 ಎಕರೆ, ಲಿಂಗನಹಳ್ಳಿ ಗ್ರಾಮದ ಸುತ್ತ 570 ಎಕರೆ ರೈತರ ಫಲವತ್ತಾದ ಭೂಮಿಗೆ ಅವರದೇ ಆದ ಮಾನದಂಡಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಿಕೊಂಡು ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.

ಬೆಲೆ ಹೆಚ್ಚಿಸದಿದ್ದರೆ ಭೂಮಿ ಕೊಡಲ್ಲ:

ರೈತರ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಸ್ವಾದೀನ ಪಡಿಸಿಕೊಳ್ಳುವ ವೇಳೆ ಪಾಲಿಸಬೇಕಾದ ನಿಯಮಗಳನ್ನು ಅಧಿಕಾರಿಗಳು ಉಲ್ಲಂಘಿಸುವಂತಿಲ್ಲ. ರೈತರ ಹಕ್ಕೊತ್ತಾಯವಾದ 4 ಪಟ್ಟು ಹೆಚ್ಚು ದರ ನಿಗದಿ ಮಾಡದ ಹೊರತು ಭೂಮಿ ಕೊಡುವುದಿಲ್ಲ. ತಾಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ವೈಜ್ಞಾನಿಕ ಬೆಲೆ ನೀಡದೆ ತಮಗಿಷ್ಟಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.

ಮಧ್ಯವರ್ತಿಗಳಿಗೆ ಮಣೆ: ಆರೋಪ

ಪ್ರತಿಭಟನೆ ವೇಳೆ ಮಾತನಾಡಿದ ಅನೇಕ ಮುಖಂಡು, ಕೆಐಡಿಬಿ ಅಧಿಕಾರಿಗಳು ರೈತರಿಗೆ ಹತ್ತಾರು ಭೂ ದಾಖಲೆಗಳನ್ನು ನೀಡುವಂತೆ ಸೂಚಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಾಲೂಕು ಕಚೇರಿಯಲ್ಲೇ ಇರುವಾಗ ದಾಖಲೆ ನೀಡುವಂತೆ ರೈತರಿಗೆ ನೋಟಿಸ್ ನೀಡುವ ಅಗತ್ಯವಾದರು ಏನಿದೆ ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್‌ ಭೇಟಿ-ಮನವಿ ಸ್ವೀಕಾರ:

ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌, ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ರೈತರ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. 3 ದಿನಗಳ ಒಳಗೆ ಈ ಸಂಬಂಧ ಮಾತುಕತೆಗೆ ಅವಕಾಶ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ, ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ಗ್ರಾಪಂ ಅಧ್ಯಕ್ಷೆ ಮಂಗಳಾ ಮಂಜುನಾಥ್, ಸದಸ್ಯರಾದ ಸೋಮಶೇಖರ್, ಭಾಗ್ಯಮ್ಮ ಸುಬ್ರಮಣಿ, ಸಿಮೆಂಟ್ ಮಂಜುನಾಥ್, ಹಮಾಮ್‌ ಪ್ರಕಾಶ್, ಭಾಗ್ಯಮ್ಮ, ಸಿದ್ದಲಿಂಗಯ್ಯ, ನಿವೃತ್ತ ಶಿಕ್ಷಕ ಸಿ.ಕೃಷ್ಣಪ್ಪ, ಮುಖಂಡರಾದ ಸೊಣ್ಣಪ್ಪನಹಳ್ಳಿ ರಮೇಶ್, ಶಿವಾಜಿ, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಮೋಹನ್‌ಬಾಬು, ರಮೇಶ್‌, ಮುನಿರಾಜು, ಜೋಗಿ ಆನಂದ್ ಮತ್ತಿತರರು ಪಾಲ್ಗೊಂಡಿದ್ದರು.

ಬಾಕ್ಸ್‌........

ವಿರೋಧವಿದ್ದರೂ ಅವೈಜ್ಞಾನಿಕ ಬೆಲೆ ನಿಗದಿ!

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಭೂಮಿಯ ದರ ನಿಗದಿ ಸಭೆಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ್ದ ಬೆಲೆಗೆ ಎಲ್ಲಾ ರೈತರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿ ಸಹಿ ಮಾಡದೇ ಸಭೆಯಿಂದ ಹೊರಬಂದಿದ್ದೇವೆ. ಆದರೂ ಏಕಪಕ್ಷೀಯವಾಗಿ ಕೆಐಡಿಬಿ ಅಧಿಕಾರಿಗಳೆ ತರಿ,ಖುಷ್ಕ,ಬಾಗಾಯ್ತು ಭೂಮಿಗೆ ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಅಂತಿಮ ಭೂಸ್ವಾಧೀನದ ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಮುಖಂಡರು ಆರೋಪಿಸಿದರು.9ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾದೀನ ವಿಚಾರದಲ್ಲಿ ಅವೈಜ್ಞಾನಿಕ ಬೆಲೆ ನಿಗದಿ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Share this article