ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿದರ ಪರಿಣಾಮವಾಗಿ ಸುತ್ತಲಿನ ಕಟ್ಟಡಗಳು ಅಪಾಯಕ್ಕೀಡಾಗುವ ಸಂಭವ ಬೆಳ್ತಂಗಡಿಯ ಕೇಂದ್ರ ಭಾಗದಲ್ಲಿ ಕಂಡು ಬಂದಿದೆ.ಬೆಳ್ತಂಗಡಿ ಪೇಟೆಯಲ್ಲಿ ವಿಶಾಲವಾದ ಸುಸಜ್ಜಿತವಾದ ನೂತನ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಸುತ್ತಲಿನ ಸಣ್ಣಪುಟ್ಟ ಕಟ್ಟಡಗಳನ್ನು ತೆರವುಗೊಳಿಸಿಕೊಂಡು ಬಳಿಕ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದೆ. ತಳ ಭಾಗದಲ್ಲಿ ಪಾರ್ಕಿಂಗ್ ಮಾಡುವ ಯೋಜನೆಯಿದ್ದು ಅದಕ್ಕಾಗಿ ಗುತ್ತಿಗೆದಾರರು ಸುಮಾರು 15 ಅಡಿ ಆಳಕ್ಕೆ ಭೂಮಿಯನ್ನು ಜೆಸಿಬಿ ಮೂಲಕ ಅಗೆದಿದ್ದಾರೆ. ಇದರಿಂದಾಗಿ ಮಣ್ಣು ಸಡಿಲಗೊಂಡು ಒಂದು ಬದಿಯಲ್ಲಿರುವ ಬೃಹತ್ ಧರೆ(ಬರೆ)ಯು ಕುಸಿಯಲಾರಂಭಿಸಿದೆ.
ಕುಸಿತ ತಡೆಯಲು ತಡೆಗೋಡೆಯ ನಿರ್ಮಾಣಮಾಡಿದ್ದರೂ ಅದರ ಕೆಲಸ ಅರ್ಧದಲ್ಲೇ ನಿಂತಿದೆ. ಗುತ್ತಿಗೆದಾರರು ಇಲ್ಲಿನ ಮಳೆ, ಮಣ್ಣು ಅಧ್ಯಯನ ನಡೆಸದೆ, ಯಾವುದೇ ಸಿದ್ದತೆ ಇಲ್ಲದೆ ಮತ್ತು ಪೂರ್ವತಯಾರಿ ಇಲ್ಲದೆ ಭೂ ಅಗೆತ ಮಾಡಿರುವ ಪರಿಣಾಮ ಮಳೆಗಾಲದ ಇಂದಿನ ಸಂದರ್ಭದಲ್ಲಿ ಅದು ಅಪಾಯ ತಂದೊಡ್ಡುವ ಚಿತ್ರಣ ನಿರ್ಮಾಣವಾಗಿದೆ.ಬರೆ ಕುಸಿಯುತ್ತಾ ಹೋದರೆ, ಒಂದೆಡೆ ಪೋಲಿಸ್ ಠಾಣೆಗೆ, ಇನ್ನೊಂದೆಡೆ ಮಿನಿ ವಿಧಾನ ಸೌಧಕ್ಕೆ ಮತ್ತೊಂದೆಡೆ ಸನಿಹದ ಬೃಹತ್ ಗುರುನಾರಾಯಣ ವಾಣಿಜ್ಯ ಸಂಕೀರ್ಣಕ್ಕೆ ಭಾಗಶಃ ಸಮಸ್ಯೆಯಾಗಲಿದೆ. ಅಲ್ಲದೆ ನಿಯೋಜಿತ ಬಸ್ ನಿಲ್ದಾಣದ ಅಸುಪಾಸಿನಲ್ಲಿ ಸಣ್ಣ ಸಣ್ಣ ಕಟ್ಟಡಗಳೂ ಇವೆ.
ಇದೀಗ ಪೋಲಿಸ್ ಠಾಣಾ ಭಾಗದಲ್ಲಿರುವ ಭೂಮಿಯು ಅಪಾಯಕಾರಿಯಾಗಿಯೇ ಕೆಳಕೆಳಗೆ ಜಾರುತ್ತಲಿದೆ. ಜಾರುವುದು ಮುಂದೆ ಮುಂದೆ ಹೋದಲ್ಲಿ ಪೋಲಿಸ್ ಠಾಣೆಗಾಗಿ ಕಟ್ಟಿರುವ ಆವರಣ ಗೋಡೆ ಸಂಪೂರ್ಣ ನೆಲಕಚ್ಚುವ ಸನ್ನಿವೇಶ ದೂರವಿಲ್ಲ.ಇದೀಗ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿ ತೆರಳಿದ್ದಾರೆ. ಧೋ ಎಂದು ಸುರಿಯುತ್ತಿರುವ ಮಳೆಗೆ ಮಣ್ಣು ಮತ್ತಷ್ಟು ಸಡಿಲಗೊಂಡು ಕುಸಿತವಾದರೆ ಅಪಾಯ ನಿಶ್ಚಿತ.