ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಭಾರಿ ಭೂ ಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದ ತಿರುವಿನಿಂದ ದತ್ತಪೀಠಕ್ಕೆ ತೆರಳುವ ರಸ್ತೆ ಪಕ್ಕದಲ್ಲೇ ಭೂ ಕುಸಿತ ಸಂಭವಿಸಿದ್ದು, ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಬಂದು ಬಿದ್ದಿವೆ.ಸೋಮವಾರ ತಡರಾತ್ರಿ ಭೂ ಕುಸಿತ ಸಂಭವಿಸಿದ್ದರಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ. ಈ ಮಾರ್ಗದಲ್ಲಿ ಹಗಲಿನ ವೇಳೆ ಸಾವಿರಾರು ಪ್ರವಾಸಿಗರು ಸಂಚಾರ ನಡೆಸುತ್ತಾರೆ. ಈ ವೇಳೆಯೇ ಭೂ ಕುಸಿತ ಸಂಭವಿಸಿದ್ದಲ್ಲಿ ಭಾರಿ ಪ್ರಮಾಣದ ಅವಘಡ ಸಂಭವಿಸುವ ಸಾಧ್ಯತೆಯಿತ್ತು. ಬೃಹದಾಕಾರದ ಬಂಡೆಗಳು ರಸ್ತೆಯ ಮೇಲೆ ಬಿದ್ದಿದ್ದು, ಯಾವುದಾದರೂ ವಾಹನ ಈ ವೇಳೆ ಬಂದಿದ್ದರೆ ಭಾರಿ ದುರಂತ ನಡೆಯುತ್ತಿದ್ದರಲ್ಲಿ ಆಶ್ಚರ್ಯವೇ ಇಲ್ಲ.
ದತ್ತಪೀಠ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಸಿಪಿಐ ಸಚಿನ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ರಸ್ತೆ ಮೇಲೆ ಬಿದ್ದಿದ್ದ ಬಂಡೆಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ದತ್ತಪೀಠ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಪ್ರವಾಸಿಗರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಸ್ಥಳೀಯರು ಅನಿವಾರ್ಯವಾಗಿ ಇದೇ ಮಾರ್ಗದಲ್ಲಿ ಸಂಚರಿಸುವಂತಾಗಿದೆ.16 ಕಡೆಗಳಲ್ಲಿ ಭೂ ಕುಸಿತ
ದತ್ತಪೀಠ ಮಾರ್ಗದಲ್ಲಿ ಕಳೆದ ಬಾರಿ ಮಳೆಯಿಂದಾಗಿ 20 ಕಡೆಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಈ ಬಾರಿ ಗಿರಿ ಪ್ರದೇಶದ ಆರಂಭದಲ್ಲೇ ದೊಡ್ಡ ಮಟ್ಟದಲ್ಲಿ ಭೂ ಕುಸಿತ ಸಂಭವಿಸುವ ಮೂಲಕ ಒಂದೇ ವರ್ಷದಲ್ಲಿ ದತ್ತಪೀಠ ಮಾರ್ಗದಲ್ಲಿ 16 ಬಾರಿ ಭೂ ಕುಸಿತ ಸಂಭವಿಸಿದಂತಾಗಿದೆ.ಗಿರಿಶ್ರೇಣಿಯಲ್ಲಿ ನಿರಂತವಾಗಿ ಮಳೆ ಸುರಿಯುತ್ತಲೇ ಇದೆ. ವಾಡಿಕೆಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಜೊತೆಗೆ ಮುಂಗಾರು ಪೂರ್ವದಿಂದಲೂ ಧಾರಾಕಾರ ಮಳೆ ನಿರಂತರವಾಗಿ ಸುರಿಯುತ್ತಲೇ ಇರುವುದರಿಂದ ಭೂ ಕುಸಿತ ಪ್ರಕರಣಗಳು ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.
ಕಳೆದ ವರ್ಷ ಗಿರಿ ಪ್ರದೇಶದಲ್ಲಿ 20 ಕಡೆಗಳಲ್ಲಿ ಭೂ ಕುಸಿತ ಸಂಭವಿಸಿತ್ತು. ಇದಲ್ಲದೆ ಮಲೆನಾಡಿನೆಲ್ಲೆಡೆ ಭೂ ಕುಸಿತ ಪ್ರಕರಣಗಳು ಸಾಮಾನ್ಯ ಎನ್ನುವಂತಾಗಿತ್ತು. ಹೀಗಾಗಿ ಜಿಯೋಲಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿ ಭೂ ಕುಸಿತ ಸಂಭವಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಮಾಡಿದ್ದರು. ಈ ವೇಳೆ ಮಹತ್ವದ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದರು.ಗಿರಿಶ್ರೇಣಿಯಲ್ಲಿನ ಶಿಲಾ ಖಂಡಗಳು ಕೆಳಮುಖವಾಗಿ ಚಲಿಸುವುದನ್ನು ತಡೆಯಲು ಪರದೆ(ಡ್ರೆಪರಿ) ಅಳವಡಿಕೆ ಮಾಡಬೇಕು. ಮತ್ತು ನೀರನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಚರಂಡಿ ನಿರ್ಮಾಣ ಮಾಡಬೇಕು. ಭಾರಿ ಮಳೆ ಸುರಿಯುವ ಸಂದರ್ಭದಲ್ಲಿ ಮತ್ತು ನಂತರದ ಅವಧಿಯಲ್ಲಿ ಸಮಗ್ರ ಸಂಚಾರ ನಿರ್ವಹಣಾ ಯೋಜನೆ ಕಾರ್ಯಗತಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದರು.
ಗಿರಿಶ್ರೇಣಿಯಲ್ಲಿ ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗಿರುವುದೇ ಭೂ ಕುಸಿತ ಸಂಭವಿಸಲು ಪ್ರಮುಖ ಕಾರಣ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.ದತ್ತಪೀಠ ಭಾಗದಲ್ಲಿ ಸುರಿದ ಮಳೆ ವಿವರ
ತಿಂಗಳು ವಾಡಿಕೆ ಮಳೆ ಸುರಿದ ಮಳೆಜೂನ್ 117 ಮಿ.ಮೀ. 193 ಮಿ.ಮೀ.
ಜುಲೈ 184 ಮಿ.ಮೀ. 597 ಮಿ.ಮೀ.ಆಗಸ್ಟ್ 440 ಮಿ.ಮೀ. 316 ಮಿ.ಮೀ.