ಮಂಗಳೂರು/ಉಪ್ಪಿನಂಗಡಿ : ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ವ್ಯಾಪ್ತಿಯ ದೊಡ್ಡತಪ್ಪಲು ಬಳಿ ಮತ್ತೆ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ವ್ಯತ್ಯಯವಾಗಿದೆ.
ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲು ಎಂಬಲ್ಲಿ ಅಲ್ಲಲ್ಲಿ ಭೂ ಕುಸಿತವುಂಟಾಗಿ ರಸ್ತೆಗೆ ಅಪ್ಪಳಿಸಿದ ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ಟ್ಯಾಂಕರನ್ನು ಶುಕ್ರವಾರ ತೆರವುಗೊಳಿಸುವ ಮೂಲಕ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಸುರಕ್ಷತೆಯ ಕಾರಣಕ್ಕೆ ರಾತ್ರಿ ವಾಹನ ಸಂಚಾರವನ್ನು ತಡೆಹಿಡಿಯಲು ಹಾಸನ ಜಿಲ್ಲಾಡಳಿತ ನಿರ್ದೇಶನ ನೀಡಿದೆ.ಹೆದ್ದಾರಿ ಅಗಲೀಕರಣ ಕಾಮಗಾರಿಯ ಕಾರಣಕ್ಕೆ ಕತ್ತರಿಸಲ್ಪಟ್ಟ ಗುಡ್ಡಗಳ ಭಾಗದಲ್ಲಿ ಭಾರಿ ಭೂ ಕುಸಿತ ಕಾಣಿಸಿ ಅಲ್ಲಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಬುಧವಾರ ಎರಡು ಕಂಟೈನರ್ ಹಾಗೂ ಒಂದು ಟ್ಯಾಂಕರ್ ಮಣ್ಣಿನಡಿ ಸಿಲುಕಿತ್ತು. ಕೆಸರು ಮಣ್ಣಿನ ರಾಶಿಯಿಂದಾಗಿ ಟ್ಯಾಂಕರ್ ತೆರವು ವಿಳಂಬವಾಗಿ ಶುಕ್ರವಾರದಂದು ಯಶಸ್ವಿಯಾಗಿದೆ.
ಈ ಕಾರಣಕ್ಕೆ ಕಳೆದೆರಡು ದಿನಗಳಿಂದ ತಡೆ ಹಿಡಿಯಲ್ಪಟ್ಟು ಹೆದ್ದಾರಿಯಲ್ಲೇ ಬಾಕಿಯಾಗಿದ್ದ ಘನ ವಾಹನಗಳನ್ನು ಶುಕ್ರವಾರ ಮಧ್ಯಾಹ್ನದಿಂದ ಸಂಜೆ ಅವಧಿಯಲ್ಲಿ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ತಡೆ ಹಿಡಿಯಲ್ಪಟ್ಟ ಎಲ್ಲ ವಾಹನಗಳು ಹೆದ್ದಾರಿಯಿಂದ ತೆರವುಗೊಂಡಿವೆ.ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹೆದ್ದಾರಿಯು ಸಂಚಾರ ಯೋಗ್ಯವಾಗಿದ್ದರೂ, ರಾತ್ರಿ ವೇಳೆ ಸಂಭಾವ್ಯ ಭಾರಿ ಮಳೆಯಿಂದ ಮತ್ತೆ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆಯನ್ನು ಅಂದಾಜಿಸಿ ಹಾಸನ ಜಿಲ್ಲಾಧಿಕಾರಿ ಶುಕ್ರವಾರ ರಾತ್ರಿ ೭ ಗಂಟೆಯಿಂದ ಶನಿವಾರ ಮುಂಜಾನೆಯವರೆಗೆ ವಾಹನಗಳ ಸಂಚಾರಕ್ಕೆ ನಿಷೇಧವಿಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುಂಡ್ಯ ತಪಾಸಣಾ ಕೇಂದ್ರದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯುವ ಸಲುವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ವಾಹನ ಸವಾರರು ಬದಲಿ ಮಾರ್ಗ ಅನುಸರಿಸುವಂತೆ ದ.ಕ. ಜಿಲ್ಲಾಡಳಿತ ಮನವಿ ಮಾಡಿದೆ.