ಭಾಷಾ ಅಭಿಯಾನ ನಿರಂತರ

KannadaprabhaNewsNetwork |  
Published : Sep 03, 2025, 01:02 AM IST
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಶ್ರೀಗಳಿಂದ ಆರ್ಶೀವಾದ ಪಡೆಯುತ್ತಿರುವುದು  | Kannada Prabha

ಸಾರಾಂಶ

ಇದು ಕೇವಲ ನಮ್ಮ ಸಮಾಜ ಅಥವಾ ಭಾಷೆಗೆ ಮಾತ್ರ ಸೀಮಿತವಲ್ಲ, ಎಲ್ಲ ಭಾರತೀಯ ಭಾಷೆಗಳಿಗೆ ಅನ್ವಯಿಸುವಂಥದ್ದು ಮತ್ತು ಸಮಾಜದ ಎಲ್ಲ ವರ್ಗದಲ್ಲೂ ಇದು ಅನುಷ್ಠಾನಕ್ಕೆ ಬರಬೇಕು

ಗೋಕರ್ಣ: ಮಠದ ಕೊನೆಯ ಶಿಷ್ಯರ ಕೊನೆಯ ಆಂಗ್ಲಪದ ನಿವೃತ್ತಿಯಾಗುವವರೆಗೂ ಸ್ವಭಾಷಾ ಅಭಿಯಾನ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೫೫ನೇ ದಿನವಾದ ಮಂಗಳವಾರ ಬೆಂಗಳೂರಿನ ಕೆ.ಟಿ. ಶ್ರೀರಾಮ್ ದಂಪತಿಗಳಿಂದ ಸರ್ವ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಹೊಸಪೇಟೆಯ ಸುಬ್ರಾಯ ಹೆಗಡೆ ಮಹಾಸೇವೆ ನೆರವೇರಿಸಿದರು.

ಇದು ಕೇವಲ ನಮ್ಮ ಸಮಾಜ ಅಥವಾ ಭಾಷೆಗೆ ಮಾತ್ರ ಸೀಮಿತವಲ್ಲ, ಎಲ್ಲ ಭಾರತೀಯ ಭಾಷೆಗಳಿಗೆ ಅನ್ವಯಿಸುವಂಥದ್ದು ಮತ್ತು ಸಮಾಜದ ಎಲ್ಲ ವರ್ಗದಲ್ಲೂ ಇದು ಅನುಷ್ಠಾನಕ್ಕೆ ಬರಬೇಕು. ಇದಕ್ಕೆ ಶ್ರೀಮಠ ಶ್ರೀಕಾರ ಹಾಕುತ್ತದೆ ಎಂದು ಬಣ್ಣಿಸಿದರು.

ಕನ್ನಡಭಾಷೆ ಶುದ್ಧವಾಗಬೇಕು, ಪ್ರತಿಯೊಂದು ಇಂಗ್ಲಿಷ್ ಶಬ್ದ ನಮ್ಮ ಭಾಷೆಯಿಂದ ತೊಲಗಬೇಕು. ಇದಕ್ಕೆ ದೊಡ್ಡ ಆಂದೋಲನ ಅಗತ್ಯವಿದೆ ಎಂದರು.

ದಿನಕ್ಕೊಂದು ಆಂಗ್ಲಪದ ಬಿಡುವ ಅಭಿಯಾನದಲ್ಲಿ ರೆಡಿ ಪದ ಬಿಡುವಂತೆ ಸಲಹೆ ಮಾಡಿದರು. ಪರ್ಯಾಯವಾಗಿ ಕನ್ನಡದಲ್ಲಿ ತಯಾರು ಎಂಬ ಪದ ಬಳಕೆಯಾಗುತ್ತದೆ. ಇದು ಪರ್ಶಿಯನ್ ಮೂಲದ್ದು. ಮೊಘಲರ ಜತೆ ಬಂದದ್ದು, ಇದರ ಬದಲು ಸಿದ್ಧ, ಸನ್ನದ್ಧ ಒಳ್ಳೆಯ ಪದಗಳು. ಇವು ವಿಶಾಲ ವ್ಯಾಪ್ತಿ ಹೊಂದಿರುವ ಪದಗಳು. ಸಿದ್ಧಿ ಸೂಚಿಸುತ್ತದೆ. ಇದರ ಜತೆಗೆ ಸಜ್ಜು, ಏರ್ಪಾಡು, ಅಣಿ ಎಂಬ ಪದಗಳನ್ನೂ ಬಳಸಬಹುದು ಎಂದು ಸಲಹೆ ಮಾಡಿದರು.

ಚಾತುರ್ಮಾಸ್ಯ ಸಮಾಧಾನ ತಂದಿದೆ. ಈ ಚಾತುರ್ಮಾಸ್ಯದಲ್ಲಿ ಹವಿ-ಸವಿ ಎರಡೂ ಮೇಳೈಸಿದೆ. ಹವಿಗನ್ನಡ ಮತ್ತು ಸವಿಗನ್ನಡದ ಬಗ್ಗೆ ಎರಡು ಒಳ್ಳೆಯ ಗೋಷ್ಠಿಗಳು ನಡೆದಿವೆ. ಪವಿತ್ರ ಮತ್ತು ಮಾಧುರ್ಯ ಎರಡೂ ತುಂಬಿದೆ. ಇದರ ಪರಿಣಾಮ ಎಲ್ಲರ ಜೀವನದ ಮೇಲೆ ಸಕಾರಾತ್ಮಕವಾಗಿ ಆಗಲಿ ಎಂದು ಆಶಿಸಿದರು.

ಚಾತುರ್ಮಾಸ್ಯದಲ್ಲಿ ನಾಲ್ಕೂ ವೇದಗಳ ಸ್ವಾಹಾಕಾರ ನೆರವೇರಿದೆ. ಚತುಃಸಂಹಿತಾ ಯಾಗದ ನಾಲ್ಕೂ ವೇದಗಳ ಯಾಗ ಮಂಗಳವಾರ ಪರ್ಯವಸಾನಗೊಂಡಿದೆ. ನಾಲ್ಕೂ ವೇದಗಳನ್ನು ಅಧ್ಯಯನ ಮಾಡಿದ ಶಿಷ್ಯರು ನಮ್ಮ ಸಮಾಜದ ಹೆಮ್ಮೆ. ಪ್ರತಿ ವರ್ಷವೂ ಈ ಯಾಗ ನಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆ ಎಂದು ಹೇಳಿದರು.

ವೇದಗಳಲ್ಲಿ ಸಾಮವೇದ ಸರ್ವಶ್ರೇಷ್ಠ ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ದೇವತೆಗಳನ್ನು ಒಲಿಸಲು ಸಾಮಗಾನ ಅತ್ಯಂತ ಶ್ರೇಷ್ಠ. ರಾಣಾಯನಿ ಶಾಖೆಯ ಹವನ ಅತ್ಯಪೂರ್ವ ಎಂದು ಬಣ್ಣಿಸಿದರು.

ಶಾಸಕ ಶಿವರಾಮ ಹೆಬ್ಬಾರ್, ಯುವ ನೇತಾರ ಸೂರಜ್ ನಾಯ್ಕ ಸೋನಿ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ಜಟ್ಟಪ್ಪ ನಾಯ್ಕ, ನೇತ್ರಾಣಿ ಗಣೇಶ್ ಮತ್ತಿತರರು ಶ್ರೀಗಳ ದರ್ಶನಾಶೀರ್ವಾದ ಪಡೆದರು. ವಿವಿವಿ ಆಡಳಿತಾಧಿಕಾರಿ ಡಾ.ಟಿ. ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ್, ಅರವಿಂದ ದರ್ಬೆ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಜಿ.ಎಲ್. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಹರ್ಷಿತಾ ಹೆಗಡೆ ಮತ್ತು ಪೂಜಾ ಹೆಗಡೆಯವರ ಭರತನಾಟ್ಯ ನಡೆಯಿತು. ಚತುಃಸಂಹಿತಾ ಯಾಗದ ಪೂರ್ಣಾಹುತಿಯಲ್ಲಿ ಶ್ರೀಗಳು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''