ಸಾಹಿತ್ಯ ಹುಣ್ಣಿಮೆಯಿಂದ ಭಾಷಾ ವೈವಿಧ್ಯತೆ ಪರಿಚಯ ಕಾರ್ಯ

KannadaprabhaNewsNetwork |  
Published : Aug 12, 2025, 12:30 AM IST
ಪೊಟೋ: 11ಎಸ್‌ಎಂಜಿಕೆಪಿ03 ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ 240ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಖಾಕಿ ಕವಿ ಮಂಜುನಾಥ ಅವರು ರಚಿಸಿದ ಕವನ ಸಂಕಲನ ಆಶಾ ಸುಂದರಿ ಹಾಗೂ ಕಾವ್ಯ ಮಂಜರಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಭಾಷಾ ವೈವಿಧ್ಯತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಕಾರ್ಯ ಸಾಹಿತ್ಯ ಹುಣ್ಣಿಮೆಯಿಂದ ನಡೆಯುತ್ತಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ಹೇಳಿದರು.

ಶಿವಮೊಗ್ಗ: ಭಾಷಾ ವೈವಿಧ್ಯತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಕಾರ್ಯ ಸಾಹಿತ್ಯ ಹುಣ್ಣಿಮೆಯಿಂದ ನಡೆಯುತ್ತಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಭಾನುವಾರ ಸಂಜೆ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಿದ್ದ 240ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಸವಾಲು ಎದುರಾಗುತ್ತಿದ್ದರೂ, ಕನ್ನಡದ ಬಗೆಗಿನ ಅನೇಕ ಕ್ರಿಯಾಶೀಲ ಚಟುವಟಿಕೆಗಳು ಭಾಷೆಯನ್ನು ಮತ್ತಷ್ಟು ಶಕ್ತಿಗೊಳಿಸುತ್ತಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸಮಾಜಮುಖಿ ಬರವಣಿಗೆ ಹೆಚ್ಚು ಜನಮೆಚ್ಚುಗೆ ಪಡೆಯುತ್ತದೆ. ಹೊಸ ಸಾಹಿತ್ಯ ಆಸಕ್ತರನ್ನು ತಲುಪಲು ಜನರಿರುವಲ್ಲಿಗೆ ಹೋಗಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದ ಜೊತೆಯಲ್ಲಿ, ಮಾತೃ ಭಾಷೆಯ ಸವಾಲುಗಳನ್ನು ಚರ್ಚಿಸುವ ಹಿನ್ನೆಲೆಯಲ್ಲಿ ಮನೆ ಮನ ಕಾರ್ಯಕ್ರಮವಾಗಿ ರೂಪಿಸಿದ ಸಾಹಿತ್ಯ ಹುಣ್ಣಿಮೆಯು 20 ವರ್ಷಗಳು ಪೂರೈಸಿದೆ. ಬಡಾವಣೆಗಳಲ್ಲಿ ಕಾರ್ಯಕ್ರಮ ಮಾಡುವಾಗ ಎಲ್ಲಾ ಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆಗಳು ಹಂಚುತ್ತಿದ್ದೇವೆ‌. ಒಳಿತು ಮತ್ತು ಕೆಡುಕುಗಳ ನಡುವೆ ಸಾಹಿತ್ಯದ ಮೂಲಕ ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತುವ ಕಾರ್ಯ ಮಾಡೋಣ ಎಂದು ಕರೆ ನೀಡಿದರು.

ಇದೇ ವೇಳೆ ಖಾಕಿ ಕವಿ ಮಂಜುನಾಥ ವಾಚಿಸಿದ ರಸ್ತೆ ಸುರಕ್ಷತೆ ಕವನ, ಉಮಾಪತಿ ಗಂಗಾರಾಮ್ ವಾಚಿಸಿದ ಮಾದರಿಯಾಗು ಓ ನನ್ನ ಅಣ್ಣ ಕವನ, ಸಾಗರದ‌ ಪೊಲೀಸ್ ಸಿಬ್ಬಂದಿ ಗೀತಾ ಸಾಗರ್ ವಾಚಿಸಿದ ಪೊಲೀಸ್ ನವರು ಏನ್ ಮಾಡ್ತಾ ಇದ್ದಾರೆ ಸ್ವಾಮಿ ಎಂಬ ಸಾರ್ವಜನಿಕರ ಅಸಡ್ಡೆಯ ಪ್ರಶ್ನೆಗಳು ಮತ್ತು ಪೊಲೀಸರ ಒತ್ತಡದ ಬಗೆಗಿನ ಕವನ ಕೇಳುಗರ ಮೆಚ್ಚುಗೆ ಗಳಿಸಿತು. ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ರವಿಕುಮಾರ್, ತಿಮ್ಮೇಶಪ್ಪ, ನಾಗಿಬಾಯಿ, ಹರೀಶ್ ಶಿವಮೊಗ್ಗ, ಬಿ.ಬಿ.ಮಂಜುನಾಥ, ಪರಶುರಾಮ, ಸಂತೋಷ.ಎಚ್.ಜಿ., ಶರತ್.ಸಿ.ಟಿ, ಲಕ್ಷ್ಮಣ್, ಜಾಯ್ ಶಿವಮೊಗ್ಗ, ನಿಂಗೇಶ್.ಡಿ, ಪ್ರಶಾಂತ ಕೆ.ಎಮ್ ಕವನ ವಾಚಿಸಿದರು.

ದೂರದರ್ಶನ ಕಲಾವಿದ ಉಮೇಶ್ ಗೌಡ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ನಾಗೇಂದ್ರ ಆಚಾರ್ಯ ಕಥೆಯನ್ನು ವಾಚಿಸಿದರು.

ಇದೇ ವೇಳೆ ಖಾಕಿ ಕವಿ ಮಂಜುನಾಥ ಅವರು ರಚಿಸಿದ ಕವನ ಸಂಕಲನ ಆಶಾ ಸುಂದರಿ ಹಾಗೂ ಕಾವ್ಯ ಮಂಜರಿ ಪುಸ್ತಕಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷರಾದ ಮಧುಸೂದನ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿಎಆರ್ ಇನ್ಸ್‌ಪೆಕ್ಟರ್ ಸೋಮಶೇಖರಪ್ಪ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಪ್ರಾರ್ಥಿಸಿದರು. ಕೆ.ಮಂಜಪ್ಪ ನಿರೂಪಿಸಿದರು. ಪೊಲೀಸ್ ಸಿಬ್ಬಂದಿ ಉಮಾಪತಿ, ರವಿಕುಮಾರ್, ಜಿ.ಲಕ್ಷ್ಮಣ, ಗಾಯಕಿ ನಳಿನಾಕ್ಷಿ, ಸುಶೀಲಾ ಷಣ್ಮುಗಂ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ