ಭಾಷೆಯು ಪರಂಪರೆ, ಸಂಸ್ಕೃತಿ ಹೊತ್ತೊಯ್ಯುವ ಜೀವಂತ ಮಾಧ್ಯಮ: ಡಾ.ಸುಷ್ಮಾ ಜೋಗನ್‌

KannadaprabhaNewsNetwork |  
Published : May 09, 2026, 02:30 AM IST
ಬಳ್ಳಾರಿಯ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ  ಪರಿಷತ್ತಿನ ತಾಲೂಕು ಘಟಕ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ  ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಮಾನವ ಸಮಾಜದ ಬೆಳವಣಿಗೆಗೆ ಭಾಷೆ ಅತ್ಯಂತ ಪ್ರಮುಖ ಪಾತ್ರವಹಿಸಿದೆ.

ಬಳ್ಳಾರಿ: ಭಾಷೆ ಎಂಬುದು ಕೇವಲ ಸಂವಹನದ ಸಾಧನವಾಗಿಯೇ ಅಲ್ಲ, ಶತಮಾನಗಳ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಹೊತ್ತೊಯ್ಯುವ ಜೀವಂತ ಮಾಧ್ಯಮವಾಗಿಯೂ ಗುರುತಿಸಿಕೊಂಡಿದೆ ಎಂದು ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಷ್ಮಾ ಎನ್. ಜೋಗನ್ ತಿಳಿಸಿದರು.

ನಗರದ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಳ್ಳಾರಿ ಕಸಾಪ ತಾಲ್ಲೂಕು ಘಟಕ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112 ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಸಮಾಜದ ಬೆಳವಣಿಗೆಗೆ ಭಾಷೆ ಅತ್ಯಂತ ಪ್ರಮುಖ ಪಾತ್ರವಹಿಸಿದ್ದು, ಪ್ರತಿಯೊಂದು ಜನಾಂಗದ ವೈಶಿಷ್ಟ್ಯತೆ, ಜೀವನ ಶೈಲಿ, ಆಚಾರ-ವಿಚಾರಗಳನ್ನು ಭಾಷೆ ತನ್ನೊಳಗೆ ಉಳಿಸಿಕೊಂಡಿದೆ.ಇಂದಿನ ಜಾಗತೀಕರಣದ ಯುಗದಲ್ಲಿ, ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಹಲವು ಭಾಷೆಗಳು ಅಸ್ತಿತ್ವದ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ, ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯತೆ ಎದುರಾಗಿದೆ. ಈ ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಕೊಡುಗೆ ದೊಡ್ಡದಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಲೇಖಕ ಡಾ.ಯು.ಶ್ರೀನಿವಾಸ ಮೂರ್ತಿ, ಜಾತಿ ,ಮತ, ಪಂಥ,ಧರ್ಮಗಳ ಮೀರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿ ,ವೈಜ್ಞಾನಿಕವಾಗಿ ಸ್ವತಂತ್ರವಾಗಿ ಚಿಂತಿಸುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಕಲಿಸಿಕೊಟ್ಟಿದೆ.

ಕನ್ನಡ ಭಾಷೆಯನ್ನು ಬೆಳೆಸುವುದರ ಜೊತೆಗೆ ಜನರಿಗೆ ಕನ್ನಡ ಭಾಷೆಯಲ್ಲಿ ಲೋಕ ಜ್ಞಾನ ನೀಡುವ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸಿದ ಹೆಗ್ಗಳಿಕೆ ಕನ್ನಡ ಸಾಹಿತ್ಯ ಪರಿಷತ್ತಿಗಿದೆ ಎಂದು ಹೇಳಿದರು.

ಭಾಷೆ ಕೇವಲ ಮಾತಿನ ಸಾಧನವಲ್ಲ; ಅದು ಒಂದು ಸಮಾಜದ ಆತ್ಮವನ್ನು ಪ್ರತಿಬಿಂಬಿಸುವ ದರ್ಪಣವಾಗಿದೆ. ವಿದ್ಯಾಭ್ಯಾಸ, ಸಾಹಿತ್ಯ, ಕಲೆ ಹಾಗೂ ಮಾಧ್ಯಮಗಳ ಮೂಲಕ ಭಾಷೆಯ ಉಳಿವು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ವೀರಭದ್ರಪ್ಪ, ಅಕ್ಷರ ಸಂಸ್ಕೃತಿಯೇ ನಾಗರೀಕ ಪ್ರಪಂಚದ ಬುನಾದಿಯಾಗಿದೆ. ಅಕ್ಷರಗಳು ಮಹತ್ತರ ಬದಲಾವಣೆಗಳನ್ನು ಮಾನವನ ಇತಿಹಾಸದಲ್ಲಿ ತಂದಿದೆ. ಕನ್ನಡ ಭಾಷೆ ಎಂಟು ಜ್ಞಾನ ಪೀಠ ಪಡೆಯಲು ಅಕ್ಷರದಿಂದ ಮಾತ್ರ ಸಾಧ್ಯವಾಗಿಸಿದೆ ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ನಾಗರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.

ಕನ್ನಡ ಬೆಳವಣಿಗೆಗೆ ಕೆಲಸ ಮಾಡಿದ ಹಿರಿಯ ಲೇಖಕಿ ಸುಶೀಲ ಶಿರೂರು, ಅಜಯ್ ಬಣಕಾರ್, ಶಿಕ್ಷಕ ಎಸ್. ಸತ್ಯನಾರಾಯಣ ಹಾಗೂ ಡಾ ಯು.ಶ್ರೀನಿವಾಸ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಹಿರಿಯ ಉಪನ್ಯಾಸಕ ಆಲಂ ಬಾಷಾ, ಹಿರಿಯ ಲೇಖಕರಾದ ಎನ್.ಡಿ.ವೆಂಕಮ್ಮ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರಿ ಕಪ್ಪಗಲ್, ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಉಪಸ್ಥಿತರಿದ್ದರು.

ಪರಿಷತ್ತಿನ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮರಿಸ್ವಾಮಿ ಮಠ, ಶರಣಬಸವ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗತ್ತಿನೆಲ್ಲೆಡೆ ರೆಡ್ ಕ್ರಾಸ್ ಸೇವೆ ಅನನ್ಯ: ಡಾ. ಅಶೋಕ್
ಮಾಹೆ ಎಂಐಟಿಗೆ ಸಿಎಫ್‌ಎ ಇನ್‌ಸ್ಟಿಟ್ಯೂಟ್ ಮಾನ್ಯತೆ