ಬ್ಯಾಕೋಡು: ಇಲ್ಲಿಯ ಸಮೀಪ ಸುಳ್ಳಳ್ಳಿ ಯೂನಿಯನ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ಕೇವಲ ಹಿಂದಿ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ಸ್ಥಳೀಯ ಗ್ರಾಹಕರು ಮತ್ತು ಸಹೋದ್ಯೋಗಿಗಳಿಗೆ ತೀವ್ರ ತೊಂದರೆಯುಂಟುಮಾಡಿದೆ. ಈ ಭಾಗದ ಬಹುತೇಕ ಜನರು ಕನ್ನಡ ಭಾಷೆ ಮಾತನಾಡುವವರಾಗಿದ್ದು, ಇದರಿಂದ ಸಾಲ ಪಡೆಯಲು, ಮರುಪಾವತಿ ಮಾಡಲು ಮತ್ತು ವ್ಯವಸ್ಥಾಪಕರೊಂದಿಗೆ ಸಂವಹನ ನಡೆಸಲು ಭಾರಿ ಅಡಚಣೆಯಾಗುತ್ತಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಭಾಷಾ ಸಮಸ್ಯೆ, ಬ್ಯಾಂಕಿನ ಇತರೆ ಸಿಬ್ಬಂದಿಗೂ ತಲೆನೋವಾಗಿ ಪರಿಣಮಿಸಿದೆ. ಗ್ರಾಹಕರು ಮತ್ತು ವ್ಯವಸ್ಥಾಪಕರ ನಡುವೆ ಸಂವಹನ ಸೇತುವಾಗಿ ಕಾರ್ಯನಿರ್ವಹಿಸಲು ಸಹೋದ್ಯೋಗಿಗಳು ಪರದಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಬ್ಯಾಂಕಿನ ದೈನಂದಿನ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದ್ದು, ಗ್ರಾಹಕರು ಗಂಟೆಗಟ್ಟಲೆ ಕಾಯುವ ಪರಿಸ್ತಿತಿ ಒದಗಿದೆ ಎಂದು ಜೀನೇಂದ್ರ ಜೈನ್ ಸಸಿಗೊಳ್ಳಿ ಆರೋಪಿಸಿದ್ದಾರೆ.
ಜನರ ಭಾಷಾ ಹಕ್ಕಿಗೆ ಧಕ್ಕೆ ತರುತ್ತಿರುವ ಈ ಸಮಸ್ಯೆಯನ್ನು ಬ್ಯಾಂಕ್ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.ಕೂಡಲೇ ವ್ಯವಸ್ಥಾಪಕರನ್ನು ವರ್ಗಾಯಿಸಿ, ಸ್ಥಳೀಯ ಭಾಷೆ ಬಲ್ಲವರನ್ನು ನೇಮಿಸದಿದ್ದರೆ ಬ್ಯಾಂಕಿನ ಎದುರು ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.