ಗಜೇಂದ್ರಗಡ: ಬೆಂಗಳೂರಿನಲ್ಲಿ ಸೆ.೧೦ರಂದು ಒಳಮೀಸಲಾತಿ ಹಾಗೂ ರಾಜ್ಯ ಸರ್ಕಾರದ ನಡೆ ವಿರೋಧಿಸಿ ನಡೆಯುವ ಪ್ರತಿಭಟನೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಾಪಂ ಮಾಜಿ ಅಧ್ಯಕ್ಷ ಆರ್.ಕೆ. ಚವ್ಹಾಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೋವಿ, ಲಂಬಾಣಿ ಸೇರಿ ವಿವಿಧ ಸಮುದಾಯಗಳ ಮುಖಂಡರು ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಒಳ ಮೀಸಲಾತಿಗಾಗಿ ಮೊದಲು ಸದಾಶಿವ ಆಯೋಗ ವರದಿ, ಬಳಿಕ ಬಿಜೆಪಿ ಸರ್ಕಾರ ಮಾಧುಸ್ವಾಮಿ ಆಯೋಗದ ವರದಿಯಲ್ಲಿ ಅನ್ಯಾಯ ಎಂದು ಹೋರಾಟ ನಡೆಸಿದ್ದೇವು. ಈಗ ಸಿದ್ದರಾಮಯ್ಯ ಸರ್ಕಾರ ನಾಗಮೋಹನದಾಸ್ ಆಯೋಗದ ಮೂಲಕ ವರದಿ ಜಾರಿಗೆ ಹೊರಟಿದೆ. ಕೇವಲ ಎರಡ್ಮೂರು ತಿಂಗಳಲ್ಲಿ ವರದಿ ಸಿದ್ಧವಾಗಿದ್ದು ವಾಸ್ತವ ದತ್ತಾಂಶವಿರಲು ಸಾಧ್ಯವಿಲ್ಲ ಎಂದು ಆರೋಪಿಸಿದ ಅವರು, ವರದಿ ಖಂಡಿಸಿ ನಡೆಯುವ ಪ್ರತಿಭಟನೆಯಲ್ಲಿ ಗಜೇಂದ್ರಗಡ ತಾಲೂಕಿನಿಂದ ಮಂಗಳವಾರ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶ್ವಸಿಗೊಳಿಸಲು ಸಮುದಾಯದ ಮುಖಂಡರು ಸಹಕರಿಸಬೇಕು ಎಂದರು. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಬಂಕದ ಮಾತನಾಡಿ, ರಾಜ್ಯದಲ್ಲಿ ಭೋವಿ, ಲಂಬಾಣಿ, ಕೊಂಚ ಹಾಗೂ ಕೊರಮ ಸೇರಿ ಉಳಿದ ಸಮುದಾಯಗಳು ಇಂದಿಗೂ ಸಹ ಕೂಲಿ, ನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ ಒಳ ಮೀಸಲಾತಿಗೆ ನಮ್ಮ ವಿರೋಧವಿದೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯು ಸರ್ಕಾರಕ್ಕೆ ಎಚ್ಚರಿಕೆಯಾಗಿದೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದರು. ಮುಖಂಡ ಶಿವಕುಮಾರ ಚವ್ಹಾಣ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ನಡೆಸುತ್ತಿದ್ದೇವೆ. ಜನ ಸಂಖ್ಯೆ ಆಧಾರದ ಮೇಲಿನ ಒಳ ಮೀಸಲಾತಿ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಹೀಗಾಗಿ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸುವುದರ ಜತೆಗೆ ಒಳಮೀಸಲಾತಿ ಬೇಡ ಎಂದು ಆಗ್ರಹಿಸುತ್ತೇವೆ ಎಂದರು.ಮುಖಂಡ ಪೀರು ರಾಠೋಡ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ಒಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತೇವೆ ಎಂದರು.ಈ ವೇಳೆ ಬಾಲು ರಾಠೋಡ, ಮೂಕಪ್ಪ ನಿಡಗುಂದಿ, ಈಶಪ್ಪ ರಾಠೋಡ, ರೂಪಲೇಶ ರಾಠೋಡ, ಶಿವಕುಮಾರ ಜಾಧವ, ಕಿರಣ ರಾಠೋಡ, ಕುಬೇರ ರಾಠೋಡ, ಷಣ್ಮುಖಪ್ಪ ಚಿಲ್‌ಝರಿ, ತುಳಸಿನಾಥ ರಾಠೋಡ, ಅಂದಪ್ಪ ರಾಠೋಡ, ಹನಮಂತಪ್ಪ ಬಂಕದ, ಯಲ್ಲಪ್ಪ ಮನ್ನೇರಾಳ ಸೇರಿ ಇತರರು ಇದ್ದರು.