ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಾಣಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ, ಕೋಟೆ ಬೀದಿಯ ಶ್ರೀಉಗ್ರ ನರಸಿಂಹ ಸ್ವಾಮಿ, ಹಳೇ ಎಂಸಿ ರಸ್ತೆಯ ಆಂಜನೇಯ ಸ್ವಾಮಿ ಹಾಗೂ ತಾಲೂಕಿನ ಕದಲೀಪುರದ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಆಬಲವಾಡಿ ಶ್ರೀತೋಪಿನ ತಿಮ್ಮಪ್ಪ ದೇವಾಲಯಗಳಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಮುಂಜಾನೆಯಿಂದಲೇ ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು. ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಮುಂಜಾನೆ ಪ್ರಧಾನ ಅರ್ಚಕ ಪ್ರದೀಪಚಾರ್ಯ ಹಾಗೂ ಸಹ ಅರ್ಚಕ ಸುರೇಶ ಆಚಾರ್ಯ ನೇತೃತ್ವದಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂಲ ವಿಗ್ರಹಕ್ಕೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಚಂದನದ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.ನಂತರ ಸೀತಾರಾಮ, ಲಕ್ಷ್ಮಣ ಹಾಗೂ ಹನುಮನ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ನಡೆಸಲಾಯಿತು. ಕೋಟೆ ಬೀದಿಯ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣದ ಶನಿವಾರದ ಮೂಲ ವಿಗ್ರಹಕ್ಕೆ ಅಭಿಷೇಕದ ನಂತರ ಬೆಣ್ಣೆ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.