ಕಳೆದ ವರ್ಷ ಜಿಲ್ಲೆಯ ಅಪಘಾತ ಪ್ರಕರಣದಲ್ಲಿ 400ಕ್ಕೂ ಹೆಚ್ಚು ಮಂದಿ ಸಾವು: ಎಸ್ಪಿ ವಿ.ಜೆ.ಶೋಭರಾಣಿ

KannadaprabhaNewsNetwork |  
Published : Jan 16, 2026, 12:45 AM IST
14ಕೆಎಂಎನ್ ಡಿ11 | Kannada Prabha

ಸಾರಾಂಶ

ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲಿಸದೆ ಸಾಕಷ್ಟು ಅಪಘಾತವಾಗುತ್ತಿದೆ. ಜನರ ಜೀವಗಳ ರಕ್ಷಣೆಗಾಗಿಯೇ ನಿಯಮ ರೂಪಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳಲ್ಲಿ 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಬಹುತೇಕರು ಸಂಚಾರಿ ನಿಯಮ ಪಾಲನೆ ಮಾಡುವುದೇ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ ತಾಲೂಕು ಕಾನೂನು ಸಮಿತಿ, ಪೊಲೀಸ್ ಇಲಾಖೆ, ತಾಲೂಕು ಆಡಳಿತ, ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲಿಸದೆ ಸಾಕಷ್ಟು ಅಪಘಾತವಾಗುತ್ತಿದೆ. ಜನರ ಜೀವಗಳ ರಕ್ಷಣೆಗಾಗಿಯೇ ನಿಯಮ ರೂಪಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಉದ್ಘಾಟಿಸಿ ಮಾತನಾಡಿ, ಸಾಕಷ್ಟು ಮಂದಿಗೆ ಅರಿವಿನ ಅಗತ್ಯವಿದ್ದು, ಹೆಲ್ಮೆಟ್ ರಹಿತ ಹಾಗೂ ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಮೊಬೈಲ್ ಬಳಕೆ, ಅತೀ ವೇಗದಿಂದ ಚಾಲನೆ ಮಾಡುವುದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಿಂದಲೇ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜ.19,20 ಮತ್ತು 21ರಂದು ಹೋಬಳಿ ಮಟ್ಟದಲ್ಲೂ ಜಾಗೃತಿ ಮೂಡಿಸಲಾಗುತ್ತದೆ. ಪ್ರತಿನಿತ್ಯ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಜಾಗೃತಿ ಹೊಂದುವ ಅಗತ್ಯವಿದೆ ಎಂದರು.

ಅಪಘಾತ ಪ್ರಕರಣಗಳನ್ನು ತಗ್ಗಿಸುವುದೇ ರಸ್ತೆ ಸುರಕ್ಷತಾ ಸಪ್ತಾಹದ ಉದ್ದೇಶವಾಗಿದೆ. ಎಲ್ಲರಿಗೂ ಅರಿವಿನ ಅಗತ್ಯವಿದೆ. ಎಲ್ಲರೂ ನಿಯಮಗಳನ್ನು ಪಾಲನೆ ಮಾಡುವುದರ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ತಹಸೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಧನಾತ್ಮಕ ಚಿಂತನೆಗಳು ಹಾಗೂ ಅಲೋಚನೆಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು.

ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ಮಾತನಾಡಿ, ಜನರ ರಕ್ಷಣೆಗಾಗಿಯೇ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿ ಮಾಡಿದ್ದು, ಎಲ್ಲರೂ ಪಾಲಿಸಬೇಕು. ಪರವಾನಗಿ ಸೇರಿದಂತೆ ಸೂಕ್ತ ದಾಖಲೆಗಳಿಲ್ಲದೇ ವಾಹನ ಚಾಲನೆ ಮಾಡಬಾರದು ಎಂದರು. ಇದಕ್ಕೂ ಮುನ್ನ ಪಟ್ಟಣದ ತಾಪಂ ಆವರಣದ ಬಳಿ ಜಾಗೃತಿ ಜಾಥಾಗೆ ಜಿಲ್ಲಾ ಎಸ್ಪಿ ವಿ.ಜೆ.ಶೋಭಾರಾಣಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಾಜಿಯಾ ಕೌಸರ್, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ.ಶಂಕರಸ್ವಾಮಿ, ಟಿ.ಎಲ್.ಶಿವಕುಮಾರ, ಕೆ.ಎಸ್.ಪರಮೇಶ್, ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ.ನಟೇಶ್, ವಿವಿಧ ಇಲಾಖೆ ಅಧಿಕಾರಿಗಳಾದ ವಿ.ಇ.ಉಮಾ, ಎಂ.ಸಿ.ನಾಗರತ್ನ, ಎನ್.ಸಂತೋಷ್ ಕುಮಾರ್, ನಂಜಮಣಿ, ಪ್ರಾಂಶುಪಾಲರಾದ ಡಿ.ಯಶೋಧ, ಅನಿತಾ, ಸಿಪಿಐ ಬಿ.ಎಸ್.ಶ್ರೀಧರ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನರೇಗಾ ಯೋಜನೆ ಹೆಸರು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧಿ ಹತ್ಯೆ
ಶ್ರೀರಂಗಪಟ್ಟಣ: ಕೋಟ್ಪಾ ಕಾಯ್ದೆ ನಿಯಮದಡಿ ವಿಶೇಷ ಕಾರ್ಯಾಚರಣೆ