ಲಾಠಿ ಚಾರ್ಜ್ ಮಾಡುವಂತಹ ಅನಿವಾರ್ಯತೆ ಇರಲಿಲ್ಲ । ಗೃಹ ಸಚಿವರು ಉದ್ಧಟನದ ಹೇಳಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿ ಅದನ್ನ ಸಮರ್ಥಿಸಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯಕ್ಷ ದರ್ಶಿಗಳು ಹೇಳಿರುವ ಪ್ರಕಾರ ಪಂಚಮಸಾಲಿ ಹೋರಾಟ ಗಾರರ ಮೇಲೆ ಲಾಠಿ ಚಾರ್ಜ್ ಮಾಡುವಂತಹ ಅನಿವಾರ್ಯತೆ ಇರಲಿಲ್ಲ. ಲಾಠಿ ಚಾರ್ಜ್ ಮಾಡುವ ಮುನ್ನ ಕೆಲವು ಎಚ್ಚರಿಕೆ ನೀಡುವ ಕೆಲಸ ಆಗಿಲ್ಲ. ಮಾಜಿಸ್ಟ್ರೇಟ್ ಹಾಜರಿದ್ದು ಆದೇಶ ಮಾಡಬೇಕಾಗುತ್ತದೆ. ಹಾಗೆ ಆಗಿಲ್ಲ ಎಂದರು.
ಸರ್ಕಾರದ ಲೋಪದೋಷ ಇದ್ದರೆ ತನಿಖೆ ನಡೆಸುತ್ತೇವೆಂದು ಹೇಳಬೇಕಾಗಿದ್ದ ರಾಜ್ಯದ ಗೃಹ ಸಚಿವರು ಉದ್ಧಟನದ ಮಾತನಾಡಿದ್ದಾರೆ. ಲಾಠಿ ಚಾರ್ಜ್ ಮಾಡದೆ ಮುತ್ತು ಕೊಡಬೇಕಾಗಿತ್ತಾ ಎಂದು ಹೇಳಿದ್ದಾರೆ. ಪರಮೇಶ್ವರ್ ಅವರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.ಲಾಠಿ ಚಾರ್ಜ್ ಮಾಡಿದ್ದು ನಮ್ಮದೇ ಪ್ರಜೆಗಳ ಮೇಲೆ, ಅವರು ಯಾರೂ ದೊಂಬಿಕೋರರು ಆಗಿರಲಿಲ್ಲ, ದೊಂಬಿ ನಡೆಸಲು ಗುಂಪು ಸೇರಿದವರಲ್ಲ, ನ್ಯಾಯಯುತ ಬೇಡಿಕೆ ಮುಂದಿಟ್ಟು ಹೋರಾಟ ಮಾಡುತ್ತಿದ್ದ ಜನರ ಮೇಲೆ ಲಾಠಿ ಮೂಲಕ ಉತ್ತರ ನೀಡಿರುವುದಲ್ಲದೆ, ಉದ್ದಟತನದ ಸಮರ್ಥನೆ ಮಾಡಿದ್ದಿರೀ, ಯಾವುದೇ ತನಿಖೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದೀರಿ, ಸರ್ಕಾರದ ಮಾತು ನೋಡಿದರೆ ಲಾಠಿ ಚಾರ್ಜ್ ಪೂರ್ವ ನಿಶ್ಚಯ ಮಾಡಿದಂತಿದೆ. ಸರ್ವಾಧಿಕಾರಿ ಮಾತ್ರ ಈ ರೀತಿಯಲ್ಲಿ ಹೇಳಲು ಸಾಧ್ಯ. ಲಾಠಿ ಚಾರ್ಜ್ ಮಾಡಿರುವುದನ್ನು ಸಮರ್ಥನೆ ಮಾಡಿರುವುದು, ಸರ್ವಾಧಿಕಾರಿ ಸರ್ಕಾರ ಹೀಗೆ ಹೇಳಲು ಸಾಧ್ಯ ಎಂದು ಆರೋಪಿಸಿದರು. ಕಾನೂನು ಬಾಹಿರವೇ ?ಪಂಚಮಸಾಲಿಗಳ ಬೇಡಿಕೆಯೇ ಸಂವಿಧಾನ ಬಾಹಿರ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳು ಮೀಸಲಾತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ಕೊಟ್ಟಿರುವ ತೀರ್ಪಿನ ಪ್ರಕಾರ, ಮತೀಯ ಆಧಾರಿತ ಮೀಸಲಾತಿ ನೀಡುವಂತ್ತಿಲ್ಲ ಎಂದು ಸಿ.ಟಿ. ರವಿ ಹೇಳಿದರು. ಅಸ್ಪೃಶ್ಯತೆ ಮತ್ತು ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ಡಾ.ಬಿ.ಆರ್. ಅಂಬೇಡ್ಕರ್ ನಿರಾಕರಿಸಿರಲಿಲ್ಲ, ಹಾಗಾಗಿ ಪಂಚಮಸಾಲಿಗಳ ಬೇಡಿಕೆ ಸಂವಿಧಾನ ಬಾಹಿರ ಆಗೋದಿಲ್ಲ. ಮುಸ್ಲೀಂಮರಿಗೆ ಮತೀಯ ಆಧಾರಿತ ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರ, ಈ ವಿಷಯದಲ್ಲಿ ಸಿಎಂ ನಡವಳಿಕೆ ಸಂವಿಧಾನ ವಿರೋಧಿ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಕೇಳುವುದು ತಪ್ಪು ಹೇಗೆ ಆಗುತ್ತೆ, ಬೇಡಿಕೆ ಮುಂದಿಡುವುದು ಅಪರಾಧ ಅಲ್ಲ, ಬೇಡಿಕೆ ಮುಂದೆ ಇಡಲು ನಕ್ಸಲರ ದಾರಿ ತುಳಿದರೆ, ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲದೆ ಬುಲೆಟ್ ಮೇಲೆ ಹೊರಟರೇ ಅದು ಅಪರಾಧ ಆಗುತ್ತೆ, ನೀವು ಒಂದು ಕಡೆ ನಕ್ಸಲರನ್ನು ಸಮರ್ಥನೆ ಮಾಡ್ತೀರಿ, ಇನ್ನೊಂದೆಡೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟು ಚಳುವಳಿ ಮಾಡುವವರ ಮೇಲೆ ಲಾಠಿ ಚಾರ್ಜ್ ಮಾಡ್ತಿರಿ, ಒಂದೆಡೆ ಬಸವಣ್ಣನವರ ವಚನ ಹೇಳ್ತಿರಿ, ಇನ್ನೊಂದೆಡೆ ಬಸವಣ್ಣನ ಅನುಯಾಯಿಗಳ ಮೇಲೆ ಲಾಠಿ ಬೀಸ್ತಿರಿ, ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ. ಈ ನಿಮ್ಮ ಸರ್ವಾಧಿಕಾರಿ ನಡವಳಿಕೆಗೆ ಕಾಲ ಉತ್ತರ ನೀಡುತ್ತದೆ ಎಂದು ಟೀಕಿಸಿದರು.