ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡನೀಯ: ಎಚ್.ಎಸ್.ಯೋಗಾನಂದ್

KannadaprabhaNewsNetwork | Published : Dec 13, 2024 12:48 AM

ಸಾರಾಂಶ

ಜಯಮೃತ್ಯುಂಜಯ ಸ್ವಾಮೀಜಿಗಳು ಕೇವಲ ಪಂಚಮಸಾಲಿ ಪಂಗಡಕ್ಕೆ ಮಾತ್ರ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿದ್ದು, ಶ್ರೀಗಳಲ್ಲಿ ನನ್ನದೊಂದು ಮನವಿ, ವೀರಶೈವ ಲಿಂಗಾಯತ ಸಮುದಾಯ ಈಗಾಗಲೇ ಸಾಕಷ್ಟು ಇಬ್ಭಾಗವಾಗಿದ್ದು, ಇಡೀ ಸಮುದಾಯದ ಎಲ್ಲಾ ಪಂಗಡಗಳನ್ನು 2ಎ ಮೀಸಲಾತಿ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ತಮ್ಮ ಮಾರ್ಗದರ್ಶನ ಇರಲಿ.

ಕನ್ನಡಪ್ರಭ ವಾರ್ತೆ ಮಾಗಡಿ

2ಎ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿರುವ ಪೊಲೀಸರ ಕ್ರಮ ಖಂಡನೀಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಚ್.ಎಸ್.ಯೋಗಾನಂದ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತ ಎಲ್ಲಾ ಉಪಪಂಗಡಗಳನ್ನು 2 ಎ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಮೀಸಲಾತಿ ನೀಡಬೇಕಾದರೆ ಸರ್ಕಾರದಲ್ಲಿ ಅದರದೇ ಆದ ನೀತಿ ನಿಯಮಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವಾಗಿ ಮಾತುಕತೆಗೆ ಕರೆದಿದ್ದರೂ ಸಹ ಯಾರೂ ಬಂದಿರಲಿಲ್ಲ, ಈ ಬಗ್ಗೆ ಸದನದಲ್ಲಿ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಪ್ರಬುದ್ಧ ಸಮುದಾಯವಾಗಿದೆ ಎಂದರು. ಇಲ್ಲಿಯವರೆಗೂ ನಮ್ಮ ಬೇಡಿಕೆಗಳನ್ನು ಮಠಾಧಿಪತಿಗಳ ನೇತೃತ್ವದಲ್ಲಿ ಶಾಂತಿಯುತವಾಗಿ ಪಡೆದುಕೊಂಡಿದ್ದೇವೆ. 2ಎ ಮೀಸಲಾತಿ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬದಲು ರಾಜ್ಯದಲ್ಲಿರುವ ಎಲ್ಲಾ ಮಠಾಧಿಪತಿಗಳು, ರಾಜಕೀಯ ಮುಖಂಡರ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ಜಯಮೃತ್ಯುಂಜಯ ಸ್ವಾಮೀಜಿಗಳು ಕೇವಲ ಪಂಚಮಸಾಲಿ ಪಂಗಡಕ್ಕೆ ಮಾತ್ರ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿದ್ದು, ಶ್ರೀಗಳಲ್ಲಿ ನನ್ನದೊಂದು ಮನವಿ, ವೀರಶೈವ ಲಿಂಗಾಯತ ಸಮುದಾಯ ಈಗಾಗಲೇ ಸಾಕಷ್ಟು ಇಬ್ಭಾಗವಾಗಿದ್ದು, ಇಡೀ ಸಮುದಾಯದ ಎಲ್ಲಾ ಪಂಗಡಗಳನ್ನು 2ಎ ಮೀಸಲಾತಿ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ತಮ್ಮ ಮಾರ್ಗದರ್ಶನ ಇರಲಿ. ಮೀಸಲಾತಿಯನ್ನು ಏಕಾಏಕಿ ರಾಜ್ಯ ಸರ್ಕಾರ ನಿಗದಿಪಡಿಸಲು ಬರುವುದಿಲ್ಲ. ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕಿದ್ದು ಈ ವಿಚಾರದಲ್ಲಿ ಸಾಕಷ್ಟು ಗೊಂದಲವಿದೆ. ಅಧಿವೇಶನದಲ್ಲಿ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದು, ಅನಂತರ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಶಾಂತಿಯುತವಾಗಿ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.

ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಈಶ ಸಿದ್ದಲಿಂಗಪ್ಪ, ನಿರ್ದೇಶಕರಾದ ಚಕ್ರಬಾವಿ ಜಗದೀಶ್, ವಿ.ಜಿ.ದೊಡ್ಡಿ ಜಗದೀಶ್, ರಾಜವರ್ಮ, ನಾಗೇಶ್, ಚರಂತ್, ಮಹೇಶ್ ಇದ್ದರು.

Share this article