ಮಕ್ಕಳ ಮನಸ್ಸು ಕಲಿಕೆಗೆ ಸ್ವತಂತ್ರವಾಗಿರಬೇಕು

KannadaprabhaNewsNetwork |  
Published : Dec 11, 2025, 01:00 AM IST
1 | Kannada Prabha

ಸಾರಾಂಶ

ಪಾಲಕರು ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಜ್ಞಾನ ತಿಳುವಳಿಕೆ ಮಟ್ಟ ಇವುಗಳ ಬಗ್ಗೆ ಯಾವಾಗಲೂ ಸಕಾರಾತ್ಮಕ ಭಾವನೆ ಹಾಗೂ ಒಳ್ಳೆಯ ದೃಷ್ಟಿಕೋನ ಹೊಂದಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅಭಿವೃದ್ಧಿಯಾಗಲು ಪ್ರೋತ್ಸಾಹ ಅಗತ್ಯ. ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಮನಸ್ಸು ಸುಂದರವಾಗಿರುತ್ತದೆ. ಗೆಲುವಿನ ಹಾದಿಯಲ್ಲಿ ಸಾಗುವ ರೀತಿ ಅವರಿಗೆ ಸ್ವತಂತ್ರ್ಯ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ 2025-26 ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪಾಲಕರು ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಜ್ಞಾನ ತಿಳುವಳಿಕೆ ಮಟ್ಟ ಇವುಗಳ ಬಗ್ಗೆ ಯಾವಾಗಲೂ ಸಕಾರಾತ್ಮಕ ಭಾವನೆ ಹಾಗೂ ಒಳ್ಳೆಯ ದೃಷ್ಟಿಕೋನ ಹೊಂದಿರಬೇಕು. ಮಗುವಿನ ಮನಸ್ಸು ಆಗ ತಾನೇ ಅರಳುವ ಸಂದರ್ಭದಲ್ಲಿಯೇ ಶಾಲೆಗೆ ಸೇರಿಸುತ್ತೇವೆ. ಶಾಲೆ ಹಾಗೂ ಮನೆ ಎರಡರಲ್ಲೂ ಮಗುವನ್ನು ಪ್ರೋತ್ಸಾಹಿಸಿದರೆ ಮಕ್ಕಳು ಸಮರ್ಥ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಮಕ್ಕಳು ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಮನೋಸ್ಥೈರ್ಯ ತುಂಬುವುದು ಪೋಷಕರ ಕರ್ತವ್ಯ ಎಂದರು.ಈ ಕಲಾ ಪ್ರತಿಭೋತ್ಸವ ಕಾರ್ಯಕಮವು ಮಕ್ಕಳು ಮತ್ತು ಯುವ ಜನತೆಯನ್ನು ಸಾಂಸ್ಕೃತಿಕ ಕ್ಷೇತ್ರದ ಕಡೆಗೆ ಬೆಳೆಯುವ ಯುವ ಕಲಾ ಪ್ರತಿಭೋತ್ಸವ ಕಾರ್ಯಕ್ರಮಗಳು ಹೆಚ್ಚು, ಹೆಚ್ಚು ನಡೆಯಬೇಕು ಎಂದರು.ರಾಷ್ಟ್ರಕವಿ ಕುವೆಂಪು ಅವರು ಈ ಜಗತ್ತಿಗೆ ಕಣ್ಣು ಬಿಟ್ಟು ಬರುವ ಪ್ರತಿಯೊಂದು ಮಗುವು ವಿಶ್ವ ಮಾನವನಾಗಿರುತ್ತದೆ. ವಿಶ್ವ ಚೈತನ್ಯ ಅದರಲ್ಲಿ ಇರುತ್ತದೆ. ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಯಾವ ವಿಭಾಗದಲ್ಲಿ ಬೇಕಾದರೂ ಪರಿಪೂರ್ಣವಾಗಿ ವಿಕಾಸ ಹೊಂದಿ ತನ್ನ ಚೈತನ್ಯದ ಶ್ರೀಮಂತಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಪ್ರತಿಯೊಂದು ಮಗುವಿನಲ್ಲಿ ಇರುತ್ತದೆ ಎಂದು ಹೇಳಿದರು.ಮಕ್ಕಳಲ್ಲಿರುವ ಧನಾತ್ಮಕ ಅಂಶ ಗುರುತಿಸಿ ಅವರನ್ನು ಪ್ರೋತ್ಸಾಹಿಸಿದಾಗ ಅವರ ಪ್ರದರ್ಶನ ಶಕ್ತಿ ಉತ್ತಮವಾಗುತ್ತದೆ. ಅದರ ಬದಲು ಮಕ್ಕಳನ್ನು ಕಡೆಗಣಿಸುವುದು, ಹೀಯಾಳಿಸುವುದು, ಬೇರೆಯವರೊಂದಿಗೆ ಹೋಲಿಸುವುದು ಮಾಡಿದಾಗ ಅವರು ಬೇರೆ ರೀತಿ ವರ್ತಿಸುತ್ತಾರೆ ಎಂದರು.ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದರ ಜತೆಗೆ ಕೆಲವು ನಿಯಂತ್ರಣವನ್ನೂ ಹಾಕಬೇಕು. ಮಕ್ಕಳು ತಮ್ಮ ವ್ಯಕ್ತಿತ್ವದ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇದಕ್ಕೆ ಪೂರಕವಾಗಿ ಮಕ್ಕಳೂ ಕೂಡ ತಮ್ಮ ಓದಿನ ಬಗ್ಗೆ ಗಮನ ನೀಡಬೇಕು. ಉತ್ತಮ ವಿಚಾರಗಳನ್ನು ಆಸಕ್ತಿಯಿಂದ ಕಲಿಯಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ತೀರ್ಪುಗಾರರಾದ ಶ್ರೀವಾಣಿ, ಲಕ್ಷ್ಮಿ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್ ಚಂದ್ರ, ಎ.ಪಿ. ಚಂದ್ರಶೇಖರ್ ಮೊದಲಾದವರು ಇದ್ದರು.

-- ಬಾಕ್ಸ್-- ಮಕ್ಕಳೊಂದಿಗೆ ಸಂವಾದ ಅಗತ್ಯ--ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ. ಉದಯ್ ಕುಮಾರ್ ಮಾತನಾಡಿ, ಮಕ್ಕಳೊಂದಿಗೆ ಸಂವಾದ ನಡೆಸಬೇಕು, ಅವರಲ್ಲಿ ಪಠ್ಯದ ಕುರಿತು ಆಸಕ್ತಿ ಹೆಚ್ಚಿಸಬೇಕು. ಅವರ ಮನಸ್ಸನ್ನು ತಮ್ಮ ಬೋಧನೆಯತ್ತ ತಿರುಗಿಸಬೇಕು. ಅದು ಶಿಕ್ಷಕರಲ್ಲಿ ಮಾತ್ರ ಇರುವ ಕಲೆಯಾಗಿದ್ದು, ಶಿಕ್ಷಕರಲ್ಲಿ ಬದ್ಧತೆ ಅಗತ್ಯವಿದೆ. ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡದೇ ಅವರಲ್ಲಿನ ಪ್ರತಿಭೆ ಗುರುತಿಸಿ ಹೊರತರುವುದು ಶಿಕ್ಷಣದ ಸಮಗ್ರ ಭಾಗವಾಗಿ ಪ್ರತಿಭಾ ಕಾರಂಜಿ ಹೆಚ್ಚು ಸೂಕ್ತ ಎಂದರು.ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಕಲಾ ವೇದಿಕೆಯು ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಬಹುಮಾನ ಸಿಗಲಿಲ್ಲ ಎಂಬ ಬೇಸರ ಬೇಡ, ಸ್ಪರ್ಧಿಸುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದು ಹೇಳಿದರು.ಸರ್ಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ವಿಕ ಕೃತಿ ಇತರ ಭಾಷೆಗೂ ತರ್ಜುಮೆಯಾಗಲಿ
ತಿಮ್ಮಕ್ಕ ಮ್ಯೂಸಿಯಂ ಬೇಲೂರಿಗೆ ಸ್ಥಳಾಂತರಿಸುವ ಹುನ್ನಾರ