ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಜಲ ವಿಮಾನ ಕ್ರೀಡೆ ಆರಂಭ: ತಾರನಾಥ್ ಎಸ್.ರಾಥೋಡ್

KannadaprabhaNewsNetwork | Published : Oct 22, 2024 12:16 AM

ಸಾರಾಂಶ

ಕೆಆರ್‌ಎಸ್ ಹಿನ್ನೀರಿನ ಎರಡು ಭಾಗಗಳಲ್ಲಿ ಪರಿಶೀಲನಾ ಕಾರ್ಯ ನಡೆಸಲಾಗಿದೆ. ವೇಣುಗೋಪಾಲಸ್ವಾಮಿ ದೇವಾಲಯದ ಸಮೀಪ ಹಾಗೂ ಆನಂದೂರು ಬಳಿಯ ಹಿನ್ನೀರಿನಲ್ಲಿ ಪರಿಶೀಲನೆ ಮಾಡಲಾಗಿದೆ. ಈ ಎರಡು ಸ್ಥಳಗಳು ವಿಮಾನದ ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳಗಳಾಗಿವೆ. ಇದರಲ್ಲಿ ಯಾವುದಾದರು ಒಂದನ್ನು ಆಯ್ಕೆಮಾಡಿಕೊಂಡು ತೆರೆಯಬಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಜಲ ವಿಮಾನ ಕ್ರೀಡೆ ಆರಂಭಿಸಲಾಗುತ್ತಿದೆ ಎಂದು ರಾಜ್ಯ ಜಲಸಾರಿಗೆ ಮಂಡಲಿ ಕಾರ್ಯಪಾಲಕ ಅಭಿಯಂತರ ತಾರನಾಥ್ ಎಸ್.ರಾಥೋಡ್ ತಿಳಿಸಿದರು.

ತಾಲೂಕಿನ ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಜಲ ವಿಮಾನ ಪ್ರವಾಸೋದ್ಯಮ ತೆರೆಯಲು ದೋಣಿ ವಿಹಾರ ನಡೆಸಿ ಸ್ಥಳ ಪರಿಶೀಲಿಸಿ ನಂತರ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ರಾಜ್ಯ ಸರ್ಕಾರದ ನೆರವಿನೊಂದಿಗೆ ಜಲಾಶಯದ ಹಿನ್ನೀರಿನಲ್ಲಿ ಜಲ ವಿಮಾನ ಪ್ರವಾಸೋದ್ಯಮ ತೆರೆಯಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ ಎಂದರು.

ಕೆಆರ್‌ಎಸ್ ಹಿನ್ನೀರಿನ ಎರಡು ಭಾಗಗಳಲ್ಲಿ ಪರಿಶೀಲನಾ ಕಾರ್ಯ ನಡೆಸಲಾಗಿದೆ. ವೇಣುಗೋಪಾಲಸ್ವಾಮಿ ದೇವಾಲಯದ ಸಮೀಪ ಹಾಗೂ ಆನಂದೂರು ಬಳಿಯ ಹಿನ್ನೀರಿನಲ್ಲಿ ಪರಿಶೀಲನೆ ಮಾಡಲಾಗಿದೆ. ಈ ಎರಡು ಸ್ಥಳಗಳು ವಿಮಾನದ ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳಗಳಾಗಿವೆ. ಇದರಲ್ಲಿ ಯಾವುದಾದರು ಒಂದನ್ನು ಆಯ್ಕೆಮಾಡಿಕೊಂಡು ತೆರೆಯಬಹುದು ಎಂದರು.

ಪ್ರವಾಸೋದ್ಯಮ ಸ್ಥಳಗಳಿಗೆ ಉತ್ತೇಜನ:

ಈ ಭಾಗದಲ್ಲಿ ಜಲ ವಿಮಾನ ಪ್ರವಾಸೋದ್ಯಮ ಇದು ಮೊದಲನೆಯದಾಗಿದೆ. ದೇಶದ ಗುಜಾರಾತ್, ಕೇರಳ, ಆಂಧ್ರಪ್ರದೇಶದಲ್ಲಿ ಈಗಾಗಲೇ ಜಲವಿಮಾನ ಪ್ರವಾಸೋದ್ಯಮ ಪ್ರಾರಂಭವಾಗಿದೆ. ಜಲವಿಮಾನ ಪ್ರವಾಸೋದ್ಯಮದಿಂದ ಸ್ಥಳೀಯ ಪ್ರವಾಸೋದ್ಯದ ಸ್ಥಳಗಳು, ದೇವಾಲಯಗಳ ಜೊತೆಗೆ ಗ್ರಾಮಗಳು ಅಭಿವೃದ್ಧಿಯಾಗಲು ಇದು ಉತ್ತೇಜನ ಸಿಗುತ್ತದೆ ಎಂದರು.

ಒಂದು ನದಿ ದಡದಿಂದ ಮತ್ತೊಂದು ನದಿ ದಡಕ್ಕೆ ವಿಮಾನ ಜಲದ (ನೀರಿನ) ಮೇಲೆ ಇಳಿಯುವುದೇ ಜಲ ವಿಮಾನಯಾನವಾಗಿದೆ. ಈ ವಿಮಾನಗಳು ಎರಡು ರೀತಿಯಲ್ಲಿ ಇಳಿಯುತ್ತದೆ. ಈ ವಿಮಾನ ನದಿಯಲ್ಲಿ ನಿರ್ಮಿಸಿರುವ ರನ್‌ವೇ ಮೂಲಕ (ಜಟ್ಟಿಯಲ್ಲಿ) ಇಳಿಯುತ್ತದೆ ಹಾಗೂ ಸಮೀಪ ಏರ್ ಪೋರ್ಟ್‌ಗಳಲ್ಲಿ ಕೂಡ ಜಲ ವಿಮಾನವನ್ನು ಇಳಿಸಬಹುದಾಗಿದೆ ಎಂದರು.

ಈ ಜಾಗದಲ್ಲಿ ಯಾವುದೇ ಪರಿಸರ ಮಾಲಿನ್ಯ ಉಂಟಗುವುದಿಲ್ಲ. ಇದಕ್ಕೆ 1.5 ಕಿ.ಮೀ ಉದ್ದ 10 ಅಡಿ ಆಳದ ಅವಶ್ಯಕತೆ ಇದ್ದು, ವಿದೇಶದಲ್ಲಿ ಈಗಾಗಲೇ ಯಶಸ್ಸುಗಳಿಸಿದೆ. ವಿಶ್ವ ವಿಖ್ಯಾತ ಬೃಂದಾವನ ಸಮೀಪದಲ್ಲಿ ಈ ರೀತಿಯ ಜಲವಿಮಾನ ಕ್ರೀಡೆಯಿಂದ ದೇಶ, ವಿದೇಶದ ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದರು.

ರಾಜ್ಯದಲ್ಲಿ ನ.10ರಂದು ಪ್ರಥಮವಾಗಿ 19 ಪ್ರವಾಸಿಗರು ಒಳಗೊಂಡ ಜಲವಿಮಾನ ಕೆಆರ್‌ಎಸ್‌ನ ಹಿನ್ನೀರಿನಲ್ಲಿ ಇಳಿಯಲಿದೆ. ಈ ಕಾರಣದಿಂದ ಜಲವಿಮಾನ ಇಳಿಯುವ ಸ್ಥಳ ಹಾಗೂ ತಾಂತ್ರಿಕ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕೆಆರ್‌ಎಸ್ ಬಳಿಯ ಹಿನ್ನೀರಿನ ಆಳ, ಉದ್ದ, ಜಲ ಸಾರಿಗೆ ಬೇಕಾಗ ತಾಂತ್ರಿಕ ಮಾಹಿತಿಯ ಸ್ಥಿತಿಗಳ ಕುರಿತು ಕಾ.ನೀ.ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಅವರ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿದರು.

ಈ ವೇಳೆ ಜಲವಿಮಾನ ಸಾರಿಗೆ ತಂತ್ರಜ್ಞ ಕಮ್ರೂನ್ ಹುಸೇನ್ ಕಾ.ನೀ.ನಿಗಮದ ಅಭಿಯಂತರ ಸುರೇಶ್ ಬಾಬು, ಲೋಕಪಯೋಗಿ ಹಾಗೂ ಜಲಸಾರಿಗೆ ಸಹಾಯಕ ಅಭಿಯಂತರರು ಇದ್ದರು.

Share this article