ಶಾಸಕ ಜಿ.ಎಚ್.ಶ್ರೀನಿವಾಸ್ । ಅಜ್ಜಂಪುರದ 20 ಕೆರೆಗಳಿಗೆ ನೀರು ಹರಿಸಲು ಏತ ನೀರಾವರಿಗೆ ಶಂಕು
ಸತತ ಪ್ರಯತ್ನದ ಫಲವಾಗಿ ಅಜ್ಜಂಪುರ ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ₹48 ಕೋಟಿ ವೆಚ್ಚದ ಮಹತ್ವದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಮಂಗಳವಾರ ಅಜ್ಜಂಪುರ ತಾಲೂಕಿನ ಗಡಿ ರಂಗಾಪುರ ಸೇರಿದಂತೆ ಒಟ್ಟು 20 ಕೆರೆಗಳಿಗೆ ನೀರು ತುಂಬಿಸುವ ₹48 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಹುಚ್ಚೇನಹಟ್ಟಿ ಜುಂಜಪ್ಪ ದೇವರ ಜಾತ್ರಾ ಮೈದಾನದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಅಜ್ಜಂಪುರ ತಾಲೂಕು ಕಳೆದ ಹಲವು ವರ್ಷಗಳಿಂದ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಜಲ ಸಂಕಷ್ಟ ಎದುರಿಸುತ್ತಿದೆ. ಬಹುತೇಕ ಕೆರೆಗಳಲ್ಲಿ ಸಮರ್ಪಕ ನೀರು ಸಂಗ್ರಹವಾಗದೆ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಜಲ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಈ ಮಹತ್ವದ ಯೋಜನೆ ಅನುಷ್ಠಾನ ಗೊಳಿಸ ಲಾಗುತ್ತಿದೆ. ಯೋಜನೆಯಡಿ ಬುಕ್ಕಾಂಬುಧಿ–ಬೇಗೂರು ದೊಡ್ಡಹಳ್ಳದ ಮೂಲಕ ವೇದಾ ನಾಲೆ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಹರಿವ ನೀರಿನಲ್ಲಿ 75 ಎಂ.ಸಿ.ಎಫ್.ಟಿ ನೀರು ಬಳಸಿ ಒಟ್ಟು 20 ಕೆರೆಗಳನ್ನು ತುಂಬಿ ಸಲು ಉದ್ದೇಶಿಸಲಾಗಿದೆ ಎಂದರು.
ಅಜ್ಜಂಪುರ ಹೋಬಳಿ ಗಡಿಹಳ್ಳಿ ಕೆರೆ-1, ಗಡಿಹಳ್ಳಿ ಕೆರೆ-2, ಕಲ್ಲಾಪುರ ಕೆರೆ-1, ಕಲ್ಲಾಪುರ ಕೆರೆ-2, ಗರಗದಹಳ್ಳಿ ಕೆರೆ, ಭೂತನಹಳ್ಳಿ ಕೆರೆ, ಅರಬಲ ಕೆರೆ ಹಾಗೂ ಅರಸಿನಘಟ್ಟ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಅದೇ ರೀತಿ ಶಿವನಿ ಹೋಬಳಿ ನಂದಿಪುರ, ಬಸವಪುರ ಕೆರೆ, ಶಂಭೈನೂರು ಕೆರೆ, ತಗ್ಗಿನಹಳ್ಳಿ ಕೆರೆ, ಗಡಿ ಗಿರಿಯಾಪುರ ಕೆರೆ, ಗಡಿ ರಂಗಾಪುರ ಕೆರೆ, ಗೀಜಿಕಟ್ಟೆ ಕೆರೆ, ಶಿವನಿ ಕಾವಲು ಕೆರೆ, ದಂದೂರು ಕೆರೆ, ಹುಚ್ಚನಹಟ್ಟಿ ಕೆರೆ, ದಾಸರಹಟ್ಟಿ ಕೆರೆ ಹಾಗೂ ಭಕ್ತನಕಟ್ಟೆ ಕೆರೆಗಳಿಗೂ ನೀರು ಒದಗಿಸಲಾಗುತ್ತದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಕೆಲವು ವೈಫಲ್ಯಗಳಿಂದ ಶಿವನಿ ಭಾಗದ ಹಲವಾರು ಕೆರೆಗಳು ತುಂಬುತ್ತಿಲ್ಲ. ಈ ಸಮಸ್ಯೆ ಗಮನದಲ್ಲಿದ್ದು, ಈಗಾಗಲೇ ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆಯ ಲಾಗಿದೆ. ಶಿವನಿ ಭಾಗದ ಕೆರೆಗಳಿಗೆ ನೀರು ತಲುಪುವಲ್ಲಿ ಇರುವ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.
ಅಭಿವೃದ್ಧಿಯೇ ಮಂತ್ರ: ನಾನು ಯಾವುದೇ ಟೀಕೆ-ಟಿಪ್ಪಣಿಗಳಿಗೆ ತಲೆಕೆಡಿಸಿ ಕೊಳ್ಳುವುದಿಲ್ಲ. ನನ್ನ ಆದ್ಯತೆ ಅಭಿವೃದ್ಧಿಪರ, ರೈತರು, ಯುವಕರು, ಶ್ರಮಿಕರು ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡುವು ದಾಗಿದೆ. ಕ್ಷೇತ್ರದ ಜಲ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ರೈತರ ಬದುಕು ಬಲಪಡಿಸುವುದೇ ನನ್ನ ಮುಖ್ಯ ಗುರಿ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.