ಫೋಟೋ- 14ಎಂವೈಎಸ್ 57
------------
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ದೊರಕಬೇಕಿರುವ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕಂದಾಯ ಸೇವೆಗಳ ವಿಶೇಷ ಆಂದೊಲನ ನಡೆಸುತ್ತಿದ್ದು, ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.
ರೈತರು ಮತ್ತು ಸಾರ್ವಜನಿಕರಿಗೆ ಆಧಾರ್ ಸೀಡಿಂಗ್, ಎನ್ಪಿಸಿಐ, ಪ್ರೋಟ್ಸ್ ಪರಿಹಾರ, ಬಾಕಿ ಇರುವ ಪೌತಿ ಖಾತೆಗಳ ಅರ್ಜಿ ಸೇರಿದಂತೆ ಇತರ ಸಮಸ್ಯೆಗಳ ಪರಿಹಾರ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡುವುದರ ಜತೆಗೆ ಸ್ಥಳದಲ್ಲಿಯೇ ಬೇಡಿಕೆಯಂತೆ ಕೆಲಸ ಮಾಡಿಕೊಡಲಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಇತರರಿಗೂ ಮನವರಿಕೆ ಮಾಡಬೇಕು ಎಂದು ಕೋರಿದರು.
ಪ್ರತೀ ದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ನಿಗದಿಪಡಿಸಿದ ಗ್ರಾಮಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಸೇವೆ ನೀಡಲಿದ್ದು, ಗ್ರಾಮಸ್ಥರು ಯಾವುದೇ ಅರ್ಜಿ ನೀಡಿದರೂ ಅವುಗಳನ್ನು ಪರಿಶೀಲಿಸಿ ಆದ್ಯತೆಯ ಮೇರೆಗೆ ಸಕಾಲದಲ್ಲಿ ಪರಿಹಾರ ಸೂಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆನಂತರ ಅವರು ಕಸಬಾ ಹೋಬಳಿಯ ಡೆಗ್ಗನಹಳ್ಳಿ, ತಿಪ್ಪೂರು ಮತ್ತು ದೊಡ್ಡೇಕೊಪ್ಪಲು ಗ್ರಾಮಗಳಿಗೆ ತೆರಳಿ ಕಂದಾಯ ಸೇವೆಗಳ ವಿಶೇಷ ಆಂದೋಲನದ ಬಗ್ಗೆ ಜನರಿಗೆ ಅರಿವು ಮೂಡಿಸಿದರು.ಶಿರಸ್ತೇದಾರ್ ಅಸ್ಲಾಂಭಾಷ, ಗ್ರಾಮ ಆಡಳಿತಾಧಿಕಾರಿ ರಶ್ಮಿ, ಗ್ರಾಮ ಸಹಾಯಕ ನಂಜಯ್ಯ ಮತ್ತು ಕಂದಾಯ ಇಲಾಖೆಯ ಇತರ ಸಿಬ್ಬಂದಿ ಇದ್ದರು.