- ಬಿಜೆಪಿ ಪ್ರತಿಭಟನೆಯಲ್ಲಿ ಮಾಡಾಳು ಮಲ್ಲಿಕಾರ್ಜುನ ಆರೋಪ । ಉಪವಿಭಾಗಾಧಿಕಾರಿಗೆ ಮನವಿ ಅರ್ಪಣೆ- - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಮತ್ತು ಪೊಲೀಸರ ಮೇಲೆ ದೌರ್ಜನ್ಯ ಖಂಡಿಸಿ ಚನ್ನಗಿರಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಮಾತನಾಡಿದ ಮಾಡಾಳು ಮಲ್ಲಿಕಾರ್ಜುನ್, ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಾಲೂಕಿನ ಎಲ್ಲ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಲಂಚವಿಲ್ಲದೆ ಯಾವ ಕೆಲಸಗಳೂ ನಡೆಯದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಮಟ್ಕಾ, ಇಸ್ಪೀಟ್, ಐ.ಪಿ.ಎಲ್. ಜೂಜಾಟಗಳು ಇರಲಿಲ್ಲ. ಆದರೆ, ಕಳೆದೊಂದು ವರ್ಷದಿಂದ ಇಂತಹ ಅಕ್ರಮ ಜೂಜಾಟಗಳು ಹೆಚ್ಚಾಗಿವೆ. ತಾಲೂಕು ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬ ಅತಂಕ ಮೂಡಿದೆ. ಯಾವುದೇ ತನಿಖೆ ನಡೆಸದೇ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಕ್ರಮ ಸರಿಯಲ್ಲ ಎಂದರು.ರಾಜ್ಯ ಸರ್ಕಾರ ಒಂದು ಸಮುದಾಯದ ಓಲೈಕೆ ಮಾಡಿ, ಅಧಿಕಾರ ನಡೆಸುತ್ತಿದೆ. ತಾಲೂಕಿನಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಠಾಣೆ ಧ್ವಂಸ ಪ್ರಕರಣ ರಾಜಕೀಯ ದುರುದ್ದೇಶದಿಂದ ಆಗಿದೆ. ದಲ್ಲಾಳಿಗಳನ್ನು ಕರೆದುಕೊಂಡು ಬಂದು ಜೂಜಾಟ ಆಡಿಸುತ್ತಿದ್ದಾರೆ. ಒಂದು ವರ್ಷದಿಂದ ಶಾಸಕರ ಆಡಳಿತ ಗಮನಿಸುತ್ತಿದ್ದೇವೆ. ಇದೇ ರೀತಿ ಮುಂದುವರಿದರೆ ಸುಮ್ಮನಿರುವುದಿಲ್ಲ. ತಾಲೂಕನ್ನು ಹಾಳು ಮಾಡಲು ಬಿಡುವುದಿಲ್ಲ ಎಂದರು.
ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವರು, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಸ್ವಾಗತಾರ್ಹ. ಆದರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ಸಂಗಮೇಶ್, ಉಮಾ ರಾಜಣ್ಣ, ಕಮಲಾ ಹರೀಶ್, ಪಟ್ಲಿ ನಾಗರಾಜ್, ಮಾರುತಿ, ನಂಜುಂಡಪ್ಪ, ಶಿವಶಂಕರ್, ರಾಕೇಶ್, ಕಾರ್ತಿಕ್, ಉಮೇಶ್, ಶಶಿಕುಮಾರ್, ರಂಗನಾಥ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
- - -ಬಾಕ್ಸ್ ಪಾಕ್ ಪರ ಘೋಷಣೆ ವಿರುದ್ಧ ಕ್ರಮವಾಗಲಿ ಠಾಣೆ ಮೇಲೆ ದಾಳಿ ಪ್ರಕರಣ ನಡೆದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೆಲವರು ಕೂಗಿರುವ ವಿಡಿಯೋ ತಾಲೂಕಿನ ಜನರ ಮೊಬೈಲ್‌ಗಳಲ್ಲಿ ಹರಿದಾಡಿದೆ. ಇಂತಹ ದೇಶವಿರೋಧಿ ಮನಸ್ಥಿತಿ ಹೊಂದಿರುವವರನ್ನು ಕೂಡಲೇ ಬಂಧಿಸಬೇಕು. ನನ್ನಲ್ಲಿರುವ ವಿಡಿಯೋ ಸಾಕ್ಷಿಯ ಸಮೇತ ಈ ದಿನವೇ ಠಾಣೆಯಲ್ಲಿ ದೂರು ನೀಡಲಿದ್ದೇನೆ. ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಡಾಳು ಮಲ್ಲಿಕಾರ್ಜುನ ಒತ್ತಾಯಿಸಿದರು.
- - -(ಈ ವರದಿಗೆ ಪೋಟೋ ಇದೆ ಪೈಲ್ ನ31ಕೆಸಿಎನ್ಜಿ1)(ಮೇ 24ರ ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟದ ಪ್ರಕರಣ ಮತ್ತು ಪೊಲೀಸರ ಮೇಲಿನ ದೌರ್ಜನ್ಯ ಮಾಡಿರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಪಕ್ಷದ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಇವರ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆಯನ್ನು ನಡೆಸಿ ಉಪವಿಭಾಗಾಧಿಕಾರಿ ಅಭಿಷೇಕ್ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು)(ಪೈಲ್ ನಂ.31ಕೆಸಿಎನ್ಜಿ2)(ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತೀರುವ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್)