ಕುರುಗೋಡು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅದರ ಪರಿಣಾಮವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಹಾಡುಹಗಲೇ ನಡೆಯುತ್ತಿವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿ ಗೆಲುವು ಅಗತ್ಯವಿದೆ. ಶ್ರೀರಾಮುಲು ಗೆದ್ದ ಬಳಿಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಜಿಲ್ಲೆಯ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಜಾರಿಗೊಳಿಸಿದ ಅನೇಕ ಯೋಜನೆಗಳು ಸ್ಥಗಿತವಾಗಿವೆ. ಆರ್ಥಿಕವಾಗಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ದೂರಿದರು.ವಿಧಾನಸಭಾ ಚುನಾವಣೆ ವೇಳೆ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣ ಮಾಡುವುದಾಗಿ ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ. ಜೀನ್ಸ್ ಪಾರ್ಕ್ ನಿರ್ಮಾಣದ ಪ್ರಯತ್ನವೂ ನಡೆದಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಬರೀ ಸುಳ್ಳುಗಳನ್ನು ಹೇಳಿಕೊಂಡು ಜನರನ್ನು ವಂಚಿಸುತ್ತಾ ಬಂದಿದೆ. ಮಳೆಯಿಲ್ಲದೆ ಎಲ್ಲ ಜಲಾಶಯಗಳು ಒಣಗಿವೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ರಕ್ಷಣೆಗೆ ಬರಬೇಕಾದ ಸರ್ಕಾರ ಕಾಲಹರಣ ಮಾಡುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ. ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ ಪುನರ್ ಪ್ರಾರಂಭಿಸುವುದು ಅಷ್ಟೇ ಸತ್ಯ ಎಂದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ಬಳಿಕ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಸೌಕರ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯ ಜನರ ಹಿತ ಕಾಯಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಮಾತನಾಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಎ.ತಿಮ್ಮಾರೆಡ್ಡಿ, ಅಳ್ಳಳ್ಳಿ ವೀರೇಶ್, ಮದಿರೆ ಕುಮಾರಸ್ವಾಮಿ, ಜೆ.ಸೋಮಶೇಖರ ಗೌಡ, ಡಾ.ಮಹಿಪಾಲ್, ಮುರಾರಿಗೌಡ ಗೋನಾಳ್, ಕೆ.ಎಂ. ಮಹೇಶ್ವರ ಸ್ವಾಮಿ, ನಟರಾಜ, ಯೋಗೀಶ್, ಎನ್. ಕೊಮಾರೆಪ್ಪ, ಅಂದ್ರಾಳ್ ಮಲ್ಲಿಕಾರ್ಜುನ, ಸುನೀಲ್, ವಿಜಯ್ ರೆಡ್ಡಿ, ನರಸಪ್ಪ ಯಾದವ್, ಕೆ.ವಿರೂಪಾಕ್ಷಿ ಮತ್ತು ಡಿಶ್ ರಾಜಾ ಸೇರಿದಂತೆ ಪಕ್ಷದ ಮುಖಂಡರು ಸಮಾರಂಭದಲ್ಲಿ ಇದ್ದರು.