ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟ ಕಾನೂನು, ಸುವ್ಯವಸ್ಥೆ

KannadaprabhaNewsNetwork |  
Published : Sep 23, 2026, 01:30 AM IST
22ಕೆಡಿವಿಜಿ3, 4-ದಾವಣಗೆರೆಯಲ್ಲಿ ಮಂಗಳವಾರ ಶಿವ ಸೇನಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು, ಈದ್ ಮಿಲಾದ್ ವೇಳೆ ಬೆಂಗಳೂರು, ಚಿಕ್ಕಮಗಳೂರು, ಅಂಕೋಲ, ಕುಡಚಿ ಸೇರಿದಂತೆ ಅನೇಕ ಕಡೆ ಆದ ಅಹಿತಕರ ಘಟನೆಗಳೇ ತಮ್ಮ ಮಾತನ್ನು ಪುಷ್ಟೀಕರಿಸುತ್ತವೆ ಎಂದು ಶಿವ ಸೇನಾ-ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.

- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶಿವ ಸೇನಾ ಕರ್ನಾಟಕ ಸ್ಪರ್ಧೆ: ಗಂಗಾಧರ ಕುಲಕರ್ಣಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು, ಈದ್ ಮಿಲಾದ್ ವೇಳೆ ಬೆಂಗಳೂರು, ಚಿಕ್ಕಮಗಳೂರು, ಅಂಕೋಲ, ಕುಡಚಿ ಸೇರಿದಂತೆ ಅನೇಕ ಕಡೆ ಆದ ಅಹಿತಕರ ಘಟನೆಗಳೇ ತಮ್ಮ ಮಾತನ್ನು ಪುಷ್ಟೀಕರಿಸುತ್ತವೆ ಎಂದು ಶಿವ ಸೇನಾ-ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಲಂಗು ಲಗಾಮು ಇಲ್ಲದೇ, ರಾಜ್ಯದಲ್ಲಿ ಅನ್ಯ ಕೋಮುಗಳಿಂದ ಗಲಾಟೆಗಳು ನಡೆಯುತ್ತಿದ್ದು, ಕಾನೂನು, ಸುವ್ಯವಸ್ಥೆಯೇ ರಾಜ್ಯದಲ್ಲಿ ಹದಗೆಡುತ್ತಿದೆ. ರಾಜ್ಯದ ವಿವಿಧ ಸಮಸ್ಯೆಗಳು ಹಾಗೂ ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ಶಿವ ಸೇನಾದಿಂದ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದರು.

ಇಡೀ ರಾಜ್ಯಾದ್ಯಂತ ಸೆಪ್ಟಂಬರ್‌ನಲ್ಲಿ ಶಿವ ಸೇನಾ ಕರ್ನಾಟಕದ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ರಾಜ್ಯ 24 ಜಿಲ್ಲೆಗಳಲ್ಲಿ ಒಟ್ಟು 20 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದೇವೆ. ಮುಂಬರುವ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಜನಸಾಮಾನ್ಯರು, ರೈತರು, ರೈತ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಬರ ಪರಿಸ್ಥಿತಿಯನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರನ್ನು ಕಡೆಗಣಿಸಿದರೆ ಶಿವ ಸೇನಾದಿಂದ ಬೆಂಗಳೂರು ಚಲೋ ಹೋರಾಟ ನಡೆಸಲಾಗುವುದು. ಕೆಪಿಎಸ್‌ಸಿ ನೇಮಕಾತಿ ಅಕ್ರಮ, ಕರ್ಮಕಾಂಡದ ಕುರಿತಂತೆ ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಸಾರ್ವಜನಿಕ ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರ ನಾನಾ ರೀತಿ ತೊಂದರೆ ನೀಡುತ್ತಿರುವುದು ಸರಿಯಲ್ಲ. ಇದು ಹಿಂದೂ ವಿರೋಧಿ ನೀತಿಯಾಗಿದೆ. ಗಣೇಶ ಹಬ್ಬಕದ ಆಚರಣೆಗೆ ಸರ್ಕಾರ ತೊಂದರೆ ನೀಡುವ ಜೊತೆಗೆ ಹಿಂದೂ ಯುವಕರನ್ನು ಗೂಂಡಾಗಳ ರೀತಿ ನೋಡುತ್ತಿದೆ. ಹೀಗೆ ತೊಂದರೆ ನೀಡಿದರೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಾಗುವುದು. ಅಲ್ಲದೇ, ಕೆಲ ಜಿಲ್ಲಾಧಿಕಾರಿಗಳು ಸಹ ಗಣೇಶ ಹಬ್ಬಕ್ಕೆ ಅಡ್ಡಿಪಡಿಸುತ್ತಿದ್ದು, ಅಂತಹ ಜಿಲ್ಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಸಿದರು.

ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಘೋಷಿಸಿದ್ದರಲ್ಲಿ ತಪ್ಪಿಲ್ಲ. ಆದರೆ, ಉರ್ದು ನಮ್ಮ ನೆಲದ ಭಾಷೆಯಲ್ಲ. ಎಲ್ಲಿಂದಲೋ ಬಂದ ಭಾಷೆಗೆ ಭಾಷಾ ಮಾನ್ಯತೆ ನೀಡಲು ಸರ್ಕಾರ ಮುಂದಾದರೆ, ಮುಸ್ಲಿಮರ ತುಷ್ಟೀಕರಣಕ್ಕೆಮುಂದಾದರೆ ರಾಜ್ಯದಲ್ಲಿ ಆಗಬಹುದಾದ ಮುಂದಿನ ಅಪಾಯ, ಅನಾಹುತಗಳಿಗೆ ರಾಜ್ಯ ಸರ್ಕಾರದ ನೇರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಂದೇ ಮಾತರಂ ಗೀತೆಯನ್ನು ಸಂಪೂರ್ಣ ಹಾಡುವಂತೆ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಿದೆ. ಸ್ವಾತಂತ್ರ್ಯ ಪಡೆಯುವಲ್ಲಿ ದೇಶದ ಸಮಸ್ತರನ್ನು ಒಂದಾಗಿ ಹೇಳಿದ್ದ ಗೀತೆಯನ್ನು ಮುಂದಿಟ್ಟುಕೊಂಡು, ಅದಕ್ಕೆ ಧರ್ಮದ ಆದಾರದಲ್ಲಿ ಕೋಮು ಬಣ್ಣ ಬಳಿಯುವ ಕೆಟ್ಟ ಮನಸ್ಥಿತಿಯ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ನಿಮ್ಮ ವರ್ತನೆ ಇದೇ ರೀತಿ ಮುಂದುವರಿದರೆ ದೇಶಕ್ಕಾಗಿ ಹೋರಾಡಿದವರ ವಂಶಸ್ಥರು, ದೇಶಭಕ್ತರನ್ನು ಒಟ್ಟುಗೂಡಿಸಿ ಹೋರಾಟ ನಡೆಸಬೇಕಾದೀತು ಎಂದು ಸೂಚ್ಯವಾಗಿ ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಅರಣಕುಮಾರ ಬಡಿಗೇರ್, ಆನಂದ ಶೆಟ್ಟಿ ಅಡ್ಡೆಯಾರ್‌, ಅಮರನಾಥ, ನಾಗರಾಜ, ಸಂತೋಷ ಇತರರು ಇದ್ದರು.

- - -

(ಬಾಕ್ಸ್‌-1)

* ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒತ್ತಾಯ

ಶಿವ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ಅರುಣಕುಮಾರ ಬಡಿಗೇರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ವಿದ್ಯಾವಂತ ಯುವಕರು ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಇಷ್ಟು ವರ್ಷವಾದರೂ ಜಿಲ್ಲೆಗೆ ಯಾವುದೇ ಹೊಸ ಕಂಪನಿ ಬಂದಿಲ್ಲ, ಇಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಿಲ್ಲ. ಇದಕ್ಕೆ ಜಿಲ್ಲೆಯ ಶಾಸಕರು, ಸಂಸದರೇ ನೇರ ಕಾರಣ. ಪಾಲಿಕೆ, ಜಿಪಂ, ತಾಪಂ ಚುನಾವಣೆಗಳು ವಿಳಂಬವಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣವೇ ಸ್ಪಂದಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಿ. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾದೀತು. ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಆಂತರಿಕ ಕಿತ್ತಾಟದಿಂದ ಬೇಸತ್ತ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಶೀಘ್ರವೇ ಶಿವಸೇನಾ ಕರ್ನಾಟಕ ಪಕ್ಷಕ್ಕೆ ಸೇರ್ಪಡೆಯಾಗುವರು ಎಂದರು.

- - -

-22ಕೆಡಿವಿಜಿ3, 4:

ದಾವಣಗೆರೆಯಲ್ಲಿ ಮಂಗಳವಾರ ಶಿವ ಸೇನಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ೬ ಸಾವಿರ ತಾಲೂಕುಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಗುರಿ: ಮಧುಸೂದನ ಸಾಯಿ
ರೈತರ ವಿಶ್ವಾಸ ಗಳಿಸುವಲ್ಲಿ ಕಾರ್ಖಾನೆಗಳು ವಿಫಲ: ಜಿಲ್ಲಾಧಿಕಾರಿ ಡಾ.ಕುಮಾರ