ಮುಂಡಗೋಡ: ಉನ್ನತ ಶಿಕ್ಷಣ ಪಡೆದು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಾನೂನು ಮತ್ತು ಸಾಮಾನ್ಯ ಜ್ಞಾನವಿಲ್ಲದಿದ್ದರೆ ಇಂದಿನ ಲೋಕಾರೂಢಿಯಲ್ಲಿ ಅದು ವ್ಯರ್ಥವೇ ಸರಿ. ಪ್ರತಿಯೊಬ್ಬರು ಸಾಮಾನ್ಯ ಜ್ಞಾನದೊಂದಿಗೆ ಕಾನೂನು ಜ್ಞಾನ ಹೊಂದಿರಬೇಕಿರುವುದು ಅತ್ಯಗತ್ಯ ಎಂದು ಶಿರಸಿ ೧ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ ಹೇಳಿದರು.ಶನಿವಾರ ಪಟ್ಟಣದ ನಗರ ಸಭಾ ಭವನದಲ್ಲಿ ವಿಶ್ವ ಮಾನವ ಅಧಿಕಾರ ಹಕ್ಕು ಲೋಕ ಪರಿಷತ್ ನ ರಾಷ್ಟ್ರೀಯ ಸಮ್ಮೇಳನ ಹಾಗೂ ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾತಿ, ಧರ್ಮ, ಲಿಂಗ ಯಾವುದೇ ಭೇದವಿಲ್ಲದೇ ಎಲ್ಲ ನಾಗರಿಕರು ಸಮಾನವಾಗಿ ಶಾಂತಿ, ಸೌಹಾರ್ದದಿಂದ ಬದುಕಬೇಕೆಂಬ ಉದ್ದೇಶದಿಂದ ನಮ್ಮ ಸಂವಿಧಾನ ನಮಗೆ ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಒಬ್ಬ ವ್ಯಕ್ತಿ ಸಮಾಜದಲ್ಲಿ ನಿರ್ಭಯ, ಆರ್ಥಿಕ, ಸಾಮಾಜಿಕ, ನೈತಿಕ ಹಾಗೂ ಕಾನೂನಾತ್ಮಕವಾಗಿ ಬಾಳಬೇಕಾಗುತ್ತದೆ. ಮಾನವ ಹಕ್ಕಿನಿಂದ ಯಾರು ಕೂಡ ವಂಚಿತರಾಗಬಾರದು ಎಂಬುವುದು ಸಂವಿಧಾನದ ಮೂಲ ಆಶಯವಾಗಿದೆ. ಕಾನೂನು ನಮಗೆ ನೀಡಿದ ಹಕ್ಕನ್ನು ಬೇರೆಯವರಿಗೆ ತೊಂದರೆಯಾಗದಂತೆ ಅದನ್ನು ಬಳಸಿಕೊಳ್ಳಬೇಕು. ನಮ್ಮ ಹಕ್ಕು ಹೇಗೆ ಚಲಾಯಿಸಬೇಕು ಹಾಗೂ ಹಕ್ಕು ಉಲ್ಲಂಘನೆಯಾದಲ್ಲಿ ಅದಕ್ಕೆ ಹೇಗೆ ನ್ಯಾಯ ಪಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನ ನಮಗಿರಬೇಕಾಗುತ್ತದೆ.ಭಾರತೀಯ ಪ್ರಜೆಯಾದ ಪ್ರತಿಯೊಬ್ಬರಿಗೂ ಸಂವಿಧಾನಿಕವಾಗಿ ಬದುಕುವ ಹಕ್ಕಿದೆ. ಕಾನೂನು ಸಮರ್ಪಕವಾಗಿ ಕಾರ್ಯಗತವಾಗಬೇಕಾದರೆ ಪ್ರತಿಯೊಬ್ಬರು ಸುಶಿಕ್ಷಿತರಾಗಬೇಕಲ್ಲದೇ ಕಾನೂನಿನ ಬಗ್ಗೆ ಅರಿತುಕೊಳ್ಳಬೇಕು. ಕಾನೂನು ಪ್ರತಿಯೊಬ್ಬರಿಗೆ ಒಂದೇ ಆಗಿರುತ್ತದೆ. ಒಬ್ಬೊಬ್ಬರ ಚಿಂತನೆಗಳು ಒಂದು ರೀತಿ ಇರುತ್ತದೆ. ಎಲ್ಲ ಚಿಂತನಾಕಾರರನ್ನು ಸೇರಿಸಿಕೊಂಡು ಸಂಘಟನಾತ್ಮಕವಾಗಿ ಮುಂದುವರೆಯಲು ಸಂಘಟನೆಗಳು ಅನಿವಾರ್ಯ. ಶೋಷಿತರ ಪರವಾಗಿ ಕೆಲಸ ಮಾಡಲು ಯಾವುದೇ ಗುರುತಿನ ಚೀಟಿಯ ಅವಶ್ಯಕತೆ ಇರುವುದಿಲ್ಲ. ಕಾನೂನಾತ್ಮಕ ನ್ಯಾಯ ಕೊಡಿಸುವಲ್ಲಿ ಪ್ರತಿಯೊಬ್ಬರು ಸಂಘಟನಾತ್ಮಕವಾಗಿ ಬದ್ದರಾಗಿರಬೇಕು ಎಂದರು.
ವಿಶ್ವ ಮಾನವಧಿಕಾರ ಹಕ್ಕು ಲೋಕ ಪರಿಷತ್ ನ ರಾಷ್ಟ್ರೀಯ ಅಧ್ಯಕ್ಷ ಡಾ. ಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮುಂಡಗೋಡ ಆರಕ್ಷಕ ನಿರೀಕ್ಷಕ ರಂಗನಾಥ ನೀಲಮ್ಮನವರ, ಪರಿಷತ್ ನ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಸುವರ್ಣ, ಪರಿಷತ್ ನ ತೆಲಂಗಾಣ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಮಹಾರಾಷ್ಟ್ರ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಉತ್ತರಕನ್ನಡ ಜಿಲ್ಲಾಧ್ಯಕ್ಷ ದೇವೇಂದ್ರ ಬಡಿಗೇರ, ಜನ ಸಂಪರ್ಕ ಸಲಹೆಗಾರ ಪ್ರಕಾಶ ಅಜ್ಜಮ್ಮನವರ, ಬೆಳಗಾವಿ ಜಿಲ್ಲಾಧ್ಯಕ್ಷ ಶಿವು ಕುಂಬಾರ, ಚಿದಾನಂದ ಜವಳಿ, ಮಲ್ಲಿಕಾರ್ಜುನ ಜಂಗಳಿ, ರಾಜು ಅಮಿನ್, ಸಂತೋಷ ಶೆಟ್ಟಿ, ಮಹಿದಾ ನದಾಫ್, ಕುಸುಮಾ ಆಲೂರ, ಶೋಭಾ ಚಲವಾದಿ, ಹನುಮಂತ ಬೋವಿವಡ್ಡರ ಮುಂತಾದವರು ಉಪಸ್ಥಿತರಿದ್ದರು. ಡಾ. ಶಂಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಬಡಿಗೇರ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.