ಮಹಿಳೆ,ಮಕ್ಕಳ ಕಾನೂನು ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು: ನ್ಯಾ.ಮಂಜುನಾಥ ನಾಯಕ್

KannadaprabhaNewsNetwork |  
Published : Oct 05, 2024, 01:31 AM IST
ಪೋಟೋ: 4ಎಸ್‌ಎಂಜಿಕೆಪಿ01ಶಿವಮೊಗ್ಗದ ಸಿಮ್ಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು, ಲಿಂಗ ಆಯ್ಕೆ ನಿಷೇಧ(ಪಿಸಿಪಿಎನ್‌ಡಿಟಿ) ಕಾಯ್ದೆ 1994 ಹಾಗೂ ಪೋಕ್ಸೊ ಕಾಯ್ದೆ 2012 ರ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಸಿಮ್ಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸಿದ್ದು ಈ ಕಾನೂನುಗಳ ಸದುಪಯೋಗ ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ತಿಳಿಸಿದರು.

ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಿಮ್ಸ್ ಕಾಲೇಜಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳು, ಲಿಂಗ ಆಯ್ಕೆ ನಿಷೇಧ (ಪಿಸಿಪಿಎನ್‌ಡಿಟಿ) ಕಾಯ್ದೆ 1994 ಹಾಗೂ ಪೋಕ್ಸೊ ಕಾಯ್ದೆ 2012 ರ ಕುರಿತಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದವರಿಗಾಗಿ ರೂಪಿಸಲಾದ ಕಾನೂನುಗಳ ದುರುಪಯೋಗ ನಿಲ್ಲಬೇಕು. ಸದುಪಯೋಗ ಆಗಬೇಕು. ಎಲ್ಲರ ಸಹಕಾರ ದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಅವು ತಲುಪಬೇಕು. ಕಾನೂನು ಜಾರಿಗೊಳಿಸುವವರು ಕಾನೂನಿನ ಉದ್ದೇಶ ಅರಿತಾಗ ಮಾತ್ರ ಪರಿಣಾಮಕಾರಿ ಯಾಗಿ ಜಾರಿಗೊಳಿಸಲು ಸಾಧ್ಯ. ವೈದ್ಯರು ಸೇರಿದಂತೆ ಪಿಸಿಪಿಎನ್‌ಡಿಟಿ ಮತ್ತು ಪೋಕ್ಸೊ ಕಾಯ್ದೆ ಅನುಷ್ಠಾನಗೊಳಿಸುವ ಎಲ್ಲರೂ ಈ ಕಾಯ್ದೆಗಳನ್ನು ಸಮರ್ಪಕ ವಾಗಿ ತಿಳಿದುಕೊಳ್ಳಬೇಕು ಎಂದರು.

ಪೋಕ್ಸೋ ಕಾಯ್ದೆಯಡಿ ಸಂತ್ರಸ್ತೆ, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು, ವಿಚಾರಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲತೆಯಿಂದ ಅಧಿಕಾರಿಗಳು, ಸಿಬ್ಬಂದಿಗಳು ನಡೆದುಕೊಳ್ಳಬೇಕು. ಇದೊಂದು ಭಿನ್ನ ಅಪರಾಧ ಆದ ಕಾರಣ ಆರೋಗ್ಯ ಇಲಾಖೆಯ ಸುತ್ತೋಲೆಯಂತೆ ಅವರನ್ನು ಉಚರಿಸಬೇಕು. ಸಾಕ್ಷಿ ಹೇಳುವಾಗ ಸಹ ಸೂಕ್ಷ್ಮವಾಗಿರಬೇಕು. ನಮ್ಮ ಉದ್ದೇಶ ನ್ಯಾಯ ಒದಗಿಸುವುದು ಮಾತ್ರ ಆಗಿರುತ್ತದೆ. ಸಂತ್ರಸ್ತರ ಮನಸ್ಸಿಗೆ ನೋವಾಗದಂತೆ ಕಾನೂನು ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮಾಡಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸಂತೋಷ್ ಮಾತನಾಡಿ, ಒಂದು ಕೆಟ್ಟ ಆಚರಣೆ ಅಥವಾ ಪದ್ಧತಿಯನ್ನು ಅಳಿಸಿ ಹಾಕಲು ಕಾನೂನನ್ನು ಜಾರಿ ಮಾಡಲಾಗುತ್ತದೆ. ಇಂತಹ ಒಂದು ಪದ್ದತಿ ಹೆಣ್ಣು ಭ್ರೂಣ ಹತ್ಯೆಯಾಗಿದೆ. ಇದೊಂದು ಹೇಯ ಮತ್ತು ಕ್ರೂರ ಕೃತ್ಯವಾಗಿದ್ದು, ಇದನ್ನು ತೊಡೆದುಹಾಕಲು ಪಿಸಿಪಿಎನ್‌ಡಿಟಿ 1994 ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಡಿಎಚ್‌ಒ ಡಾ.ನಾಗರಾಜ್ ಮಾತನಾಡಿ, ಲಿಂಗಾನುಪಾತ ಸಮತೋಲನದಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡು ತ್ತೇವೆ. ಈಗಲೂ ಗಂಡು ಬೇಕೆಂಬ ಬೇಡಿಕೆ ಇದೆ. ಆದರೆ ಮೊದಲಿನಷ್ಟು ಇಲ್ಲ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಇದೆ. ಕೇರಳದಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಿದೆ. ಹೆಣ್ಣಿಗೆ ಶಿಕ್ಷಣ ಮತ್ತು ಸುರಕ್ಷತೆಯ ವಾತಾವರಣ ನೀಡಬೇಕು ಎಂದರು.

ಐಎಂಎ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಪಿಸಿಪಿಎನ್‌ಡಿಟಿ ಕಾಯ್ದೆ ಮೊದಲಿಗಿಂತ ಹೆಚ್ಚಿನ ರೀತಿಯಲ್ಲಿ ಈಗ ಪರಿಣಾಮಕಾರಿಯಾಗಿದೆ. ಇದರ ಅನುಷ್ಠಾನದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ ಎಂದ ಅವರು ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ವೈದ್ಯರು ಸೇರಿದಂತೆ ಎಲ್ಲ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಡಿವೈಎಸ್‌ಪಿ ಬಾಬು ಅಂಜನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರೂಪಣಾಧಿಕಾರಿ ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಶಶಿರೇಖಾ, ರೇಡಿಯಾಲಜಿಸ್ಟ್‌ಗಳು, ವೈದ್ಯ ವಿದ್ಯಾರ್ಥಿಗಳು, ತಂತ್ರಜ್ಞರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಲಿಂಗಾನುಪಾತ ಸಮತೋಲನಗೊಳಿಸಬೇಕು: ನ್ಯಾಯಮೂರ್ತಿ ಸಲಹೆ

ಹೆಣ್ಣು ಭ್ರೂಣ ಹತ್ಯೆ ಒಂದು ದುಷ್ಕೃತ್ಯವಾಗಿದ್ದು, ಪಿಸಿಎನ್‌ಡಿಟಿ ಕಾಯ್ದೆ ಜಾರಿಯಿಂದ ಸಾಕಷ್ಟು ಸುಧಾರಣೆಯಾಗಿದೆ. ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಲಿಂಗಾನುಪಾತ 1000 ಪುರುಷರಿಗೆ 940 ಮಹಿಳೆ, ರಾಜ್ಯದಲ್ಲಿ 1000 ಕ್ಕೆ 973 ಮತ್ತು ಜಿಲ್ಲೆಯಲ್ಲಿ 1000 ಪುರುಷರಿಗೆ 991 ಲಿಂಗಾನುಪಾತವಿದ್ದು, ಇದನ್ನು ಸಮತೋಲನಗೊಳಿಸಲು ಇನ್ನಷ್ಟು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಮಂಜುನಾಥ ನಾಯಕ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!