ಧಾರವಾಡ:
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 8ನೇ ಅಂತರ್ ಕಾಲೇಜುಗಳ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜುಲೈ 25 ಹಾಗೂ 26ರಂದು ಇಲ್ಲಿಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ. ಸಿ. ಬಸವರಾಜು ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾನೂನು ವಿವಿ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 145 ಕಾಲೇಜುಗಳಿದ್ದು ಜೂನ್ ತಿಂಗಳಲ್ಲಿ ಮೈಸೂರು, ಮಂಗಳೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಹುಬ್ಬಳ್ಳಿ ಹಾಗೂ ಕಲಬುರ್ಗಿ ಎಂದು ಆರು ವಲಯಗಳಾಗಿ ವಿಂಗಡಿಸಿ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ 56 ಕಾಲೇಜುಗಳ ಒಟ್ಟು 262 (146 ಪುರುಷ, 116 ಮಹಿಳಾ) ವಿದ್ಯಾರ್ಥಿಗಳು ಇದೀಗ ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್ ಒಲಂಪಿಯನ್ ಪ್ರಮಿಳಾ ಅಯ್ಯಪ್ಪ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ದೊಡ್ಡ ನರಸಿಂಗ ಗಣೇಶ ಭಾಗವಹಿಸುತ್ತಿದ್ದಾರೆ ಎಂದರು.
14 ಸ್ಪರ್ಧೆಗಳು:ಜುಲೈ 25ರ ಮಧ್ಯಾಹ್ನ 2ರಿಂದ ಅಥ್ಲೆಟಿಕ್ಸ್ ಶುರುವಾಗಲಿದ್ದು ಎರಡು ದಿನಗಳಲ್ಲಿ ಪುರುಷ ಹಾಗೂ ಮಹಿಳೆಯರಿಗೆ ತಲಾ 14 ಆಟಗಳು ನಡೆಯಲಿವೆ. ವಿಶೇಷ ಎಂದರೆ, ವಿದ್ಯಾರ್ಥಿಗಳು ಮಾತ್ರವಲ್ಲದೇ ಬೋಧಕ, ಬೋಧಕೇತರ ಹಾಗೂ ತಂಡದ ಮ್ಯಾನೇಜರ್‌ಗಳಿಗೆ 100 ಮೀಟರ್ ಓಟ, ಶಾಟಪೂಟ್ ಹಾಗೂ ರೀಲೆ ಸ್ಪರ್ಧೆಗಳನ್ನು ವಯೋಮಿತಿ ಆಧಾರದ ಮೇಲೆ ಆಯೋಜಿಸಲಾಗಿದೆ. ಸ್ಪರ್ಧಾಳುಗಳಿಗೆ ಟೀಶರ್ಟ್, ಶಾರ್ಟ್ಸ್, ಕ್ಯಾಪ್ ಒದಗಿಸುತ್ತಿದ್ದು, ಎಲ್ಲರಿಗೂ ವಸತಿ ಸೌಲಭ್ಯ ಸಹ ಒದಗಿಸಲಾಗಿದೆ. ಪ್ರತಿಯೊಂದು ಸ್ಪರ್ಧೆಯಲ್ಲಿ ಈ ಹಿಂದಿನ ದಾಖಲೆ ಮುರಿದ ಪಟುವಿಗೆ ₹ 5 ಸಾವಿರ ನಗದು ಬಹುಮಾನ ನೀಡಲಾಗುವುದು. ಅತ್ಯುತ್ತಮ ವೈಯಕ್ತಿಕ ಪುರುಷ, ಮಹಿಳಾ ಕ್ರೀಡಾಪಟುವಿಗೆ ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು ಎಂದು ಪ್ರೊ. ಬಸವರಾಜು ತಿಳಿಸಿದರು.
ಇದೇ ವೇಳೆ ನಿವೃತ್ತಿ ಹೊಂದಿದ ಕ್ರೀಡಾ ನಿರ್ದೇಶಕರಿಗೆ ಹಾಗೂ ಅಖಿಲ ಭಾರತ ಮಟ್ಟದಲ್ಲಿ ಅಂತರ್ ವಿಶ್ವವಿದ್ಯಾಲಯ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ನಗದು ಬಹುಮಾನ ನೀಡಿದ್ದು ಕ್ರೀಡಾಕೂಟ ವೇಳೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕುಲಸಚಿವೆ ಅನುರಾಧಾ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಲೀದ ಖಾನ್ ಇದ್ದರು.