ಕನ್ನಡಪ್ರಭ ವಾರ್ತೆ ಮದ್ದೂರು
ಕಲಬುಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನ ತೀರ್ಪು ಕೊಡುವ ವಿಚಾರದಲ್ಲಿ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ವಿರುದ್ಧ ಪಟ್ಟಣದ ವಕೀಲರು ಶುಕ್ರವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ವಕೀಲರ ಸಂಘದ ಕಾರ್ಯದರ್ಶಿ ಎಂ.ಜೆ.ಸುಮಂತ್ ನೇತೃತ್ವದಲ್ಲಿ ಸಭೆ ನಡೆಸಿದ ವಕೀಲರು, ಆರ್‌ಎಸ್‌ಎಸ್ ಪಥಸಂಚಲನದ ಕುರಿತು ತೀರ್ಪು ಕೊಡುವ ವಿಚಾರದಲ್ಲಿ ನ್ಯಾಯಾಧೀಶರು ಒಂದು ಪಕ್ಷದ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜ್ಞಾನಪ್ರಕಾಶ್ ಸ್ವಾಮೀಜಿಯನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯಲು ವಕೀಲರು ನಿರ್ಣಯ ಕೈಗೊಂಡರು.ನಂತರ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಆವರಣದಲ್ಲಿ ಕೆಲಕಾಲ ಮೌನ ಪ್ರತಿಭಟನೆ ನಡೆಸಿ ಉರಿಲಿಂಗಿಪೆದ್ದಿ ಮಠ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿರಿಯ ವಕೀಲ ಟಿ.ನಾಗರಾಜು, ಎಚ್. ಮಾದೇಗೌಡ, ಎಂ.ಸಿ.ಚಂದ್ರಶೇಖರ್, ಎಂ.ಎಂ.ಪ್ರಶಾಂತ್, ಉಮೇಶ್, ಯೋಗಾನಂದ, ಕೆ.ಶಿವಣ್ಣ, ಚೆಲುವರಾಜು, ಮಹೇಶ, ಜಗದೀಶ್, ಪ್ರಿಯಾಂಕ, ವಿಲಾಸಿನಿ ಮತ್ತಿತರರು ಭಾಗವಹಿಸಿದ್ದರು.
ನಿಟ್ಟೂರು ಕೋಡಿಹಳ್ಳಿ ಡೇರಿಗೆ ನಿರ್ದೇಶಕರಾಗಿ 10 ಮಂದಿ ಆಯ್ಕೆಹಲಗೂರು:
ಸಮೀಪದ ನಿಟ್ಟೂರು ಕೋಡಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜುಲೈ 27ರಂದು 5 ವರ್ಷಗಳ ಅವಧಿಗೆ ಚುನಾವಣೆ ನಡೆದು ಫಲಿತಾಂಶವನ್ನು ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ತಡೆಹಿಡಿಯಲಾಗಿತ್ತು.ಶುಕ್ರವಾರ ಫಲಿತಾಂಶ ಹೊರ ಬಂದಿದ್ದು, ರಿಟರ್ನಿಂಗ್ ಆಫೀಸರ್ ತ್ಯಾಗರಾಜ್ ಪ್ರಸಾದ್ ರವರು ಕೆ.ಮಂಚೇಗೌಡ, ಪ್ರಕಾಶ್, ನಿಂಗೇಗೌಡ, ಕೆ.ಸಿ.ಗೌಡ, ಸಣ್ಣಪ್ಪ, ರುಕ್ಮಂಗದಾಚಾರಿ, ಗೋವಿಂದರಾಜು, ರಾಜೇಗೌಡ, ಎನ್.ತಾಯಮ್ಮ, ಕೆಂಪಮ್ಮ, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನಿರ್ದೇಶಕರಾಗಿ ಆಯ್ಕೆಯಾದ ಎನ್.ರಾಜೇಗೌಡ ಮಾತನಾಡಿ, ಹೈಕೋರ್ಟ್ ಆದೇಶದ ಮೇರೆಗೆ ತಡೆಹಿಡಿಯಲಾಗಿದ್ದ ಫಲಿತಾಂಶವನ್ನು ಇಂದು ಘೋಷಣೆ ಮಾಡಲಾಗಿದೆ. ನಮ್ಮ ತಂಡದಿಂದ 8 ಜನರು ಆಯ್ಕೆಯಾಗಿದ್ದು, ಎದುರಾಳಿ ತಂಡದಿಂದ ಇಬ್ಬರು ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದರು.ಚುನಾವಣೆಗೆ ಸಹಕರಿಸಿದ ನಮ್ಮ ಎಲ್ಲ ಮತದಾರರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮ ಹಾಲು ಉತ್ಪಾದಕರ, ಗ್ರಾಹಕರು ಹಾಗೂ ಒಕ್ಕೂಟದ ಏಳಿಗೆಗಾಗಿ ಎಲ್ಲರ ಸಲಹೆ ಸಹಕಾರ ಪಡೆದು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್, ಹಾಲು ಪರೀಕ್ಷಕ ನಂಜುಂಡೇಗೌಡ, ಸಹಾಯಕ ಕೃಷ್ಣ, ಪೂರ್ಣಿಮಾ, ಸೇರಿದಂತೆ ಇತರರು ಇದ್ದರು.