ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಮನಗರ ವಕೀಲರ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ಹಾಗೂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಈ ಕೂಡಲೇ ಸರ್ಕಾರ ವಕೀಲರ ಸಂರಕ್ಷಣೆ ಕಾಯ್ದೆ ಜಾರಿ ಮಾಡಬೇಕು. ಈ ಪ್ರಕರಣಕ್ಕೆ ಸಂಬಂಧಪಟ್ಟಂತ ಅಧಿಕಾರಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್ ಶ್ರೀನಿವಾಸ್ ಸರ್ಕಾರವನ್ನು ಆಗ್ರಹಿಸಿದರು.ಇತ್ತೀಚೆಗೆ ರಾಮನಗರ ವಕೀಲರ ಮೇಲೆ ಪೋಲಿಸ್ ಅಧಿಕಾರಿಗಳು ಹಲ್ಲೆ ನಡೆಸಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಿರುವುದನ್ನು ಖಂಡಿಸಿ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ವತಿಯಿಂದ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.ಠಾಣಾಧಿಕಾರಿ ಅಮಾನತಿಗೆ ಆಗ್ರಹಹಿರಿಯ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಐಜೂರು ಪೋಲೀಸ್ ಠಾಣಾಧಿಕಾರಿ ಸೈಯದ್ ತನ್ವಿರ್ ಹುಸ್ಸೇನ್ ಸುಖಾ ಸುಮ್ಮನೆ ವಕೀಲರ ಸಂಘದ ಸುಮಾರು 40 ಜನ ವಕೀಲರ ಮೇಲೆ ಸುಳ್ಳು ಎಫ್.ಐ.ಆರ್ ದಾಖಲು ಮಾಡಿರುವುದರ ಬಗ್ಗೆ ತನಿಖೆ ನಡೆಸ ಬೇಕು, ಪೋಲೀಸ್ ಠಾಣಾಧಿಕಾರಿ ಸೈಯದ್ ತನ್ವಿರ್ ಹುಸ್ಸೇನ್ ರವರನ್ನು ಈ ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ಗೌರವಾಧ್ಯಕ್ಷ ಗೋವಿಂದರೆಡ್ಡಿ, ಕಾರ್ಯದರ್ಶಿ ಮುರಳಿ ಮೋಹನ್, ಖಜಾಂಚಿ ಹರಿಕೃಷ್ಣ, ಹಿರಿಯ ವಕೀಲರಾದ ಎಸ್.ವಿ.ರಾಮಮೂರ್ತಿ, ಪಿ ಸುಬ್ರಮಣಿ, ತ್ರಯಂಭಕರಾವ್, ವಕೀಲರಾದ ಮಂಜುನಾಥ್ ರೆಡ್ಡಿ, ಮತ್ತಿತರರು ಇದ್ದರು.ಗುಡಿಬಂಡೆಯಲ್ಲೂ ವಕೀಲರ ಪ್ರತಿಭಟನೆ
ಗುಡಿಬಂಡೆ: ರಾಮನಗರದ 40 ಮಂದಿ ವಕೀಲರ ಮೇಲೆ ಸುಳ್ಳು ಎಫ್ಐಆರ್ ದಾಖಲು ಮಾಡಿರುವ ಪಿಎಸ್ಐ ರವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.ಈ ವೇಳೆ ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ ಮಾತನಾಡಿ, ರಾಮನಗರ ಪ್ರಕರಣ ಕುರಿತಂತೆ ರಾಜ್ಯಾದ್ಯಂತ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಸುಳ್ಳು ಮೊಕದ್ದಮೆ ದಾಖಲು ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗುಡಿಬಂಡೆ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ನಂದೀಶ್ವರರೆಡ್ಡಿ, ಹಿರಿಯ ವಕೀಲರು, ಪಿ.ಶಿವಪ್ಪ, ನಾರಾಯಣಸ್ವಾಮಿ, ವಕೀಲರಾದ ಗಂಗಾಧರಪ್ಪ, ಕೆ.ಆರ್.ಮಂಜುನಾಥ್, ಎನ್.ನರಸಿಂಹಪ್ಪ, ನರೇಂದ್ರ, ಬಾಬು, ಬಾಬಾಜಾನ್, ಅಮರೇಶ, ಮತ್ತಿತರರು ಇದ್ದರು.