ವಕೀಲರಲ್ಲಿ ವಾಕ್‌ ಚಾತುರ್ಯದೊಂದಿಗೆ ಶಿಸ್ತು, ಮಾನವೀಯತೆ ಇರಲಿ

KannadaprabhaNewsNetwork |  
Published : Nov 06, 2025, 02:15 AM IST
5ಡಿಡಬ್ಲೂಡಿ7ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವ ಭಾಷಣ ಮಾಡಿದ ನ್ಯಾಯಮೂರ್ತಿ ಶಿವರಾಜ ಪಾಟೀಲ | Kannada Prabha

ಸಾರಾಂಶ

ಭಾರತದಲ್ಲಿ ಈಗ ಮೊಕ್ಕದ್ದಮೆಗಳ ಸ್ವರೂಪ ಬದಲಾಗಿದೆ. ಸಿವಿಲ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಸೈಬರ್‌ ಅಪರಾಧದಂತಹ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವೃತ್ತಿಯು ಸಾಂಪ್ರದಾಯಿಕ ಹಾಗೂ ರೂಪಾಂತರದ ಕವಲು ದಾರಿಯಲ್ಲಿ ನಿಂತಿದೆ.

ಧಾರವಾಡ:

ವ್ಯಕ್ತಿತ್ವ ಇಲ್ಲದ ಜ್ಞಾನ ತುಂಬ ಅಪಾಯಕಾರಿ. ಸಹಾನುಭೂತಿ ಇಲ್ಲದ ಬುದ್ಧಿಶಕ್ತಿ ಬರಡು. ವಾಕ್ ಚಾತುರ್ಯವಷ್ಟೇ ನ್ಯಾಯವಾದಿಗಳ ಶಕ್ತಿ ಆಗಬಾರದು. ಯುವ ವಕೀಲರು ವೃತ್ತಿಯಲ್ಲಿ ಮಾನವೀಯತೆ, ಸಮಗ್ರತೆ, ಶಿಸ್ತು, ವಿನಮ್ರತೆ ಮೈಗೂಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಜ್ಯಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಡಾ. ಶಿವರಾಜ ಪಾಟೀಲ ಹೇಳಿದರು.

ಇಲ್ಲಿಯ ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಇನ್ಮುಂದೆ ಕಾನೂನು ನ್ಯಾಯಾಲಯದ ಕೊಠಡಿಗಳಿಗೆ ಮಾತ್ರ ಸೀಮಿತಗೊಳ್ಳಲಾರದು. ನಮ್ಮ ಜೀವನದ ಪ್ರತಿ ಭಾಗವನ್ನೂ ಮುಟ್ಟಲಿದೆ. ಆದ್ದರಿಂದ ವಕೀಲಿ ವೃತ್ತಿಗೆ ಬರುವವರು ಇಂದಿನ ಡಿಜಿಟಲ್ ಯುಗದಲ್ಲಿಯೂ ಗೌಪ್ಯತೆ, ಘನತೆ ಎತ್ತಿ ಹಿಡಿಯಬೇಕು ಎಂದು ಕಿವಿಮಾತು ಹೇಳಿದರು.

ಭಾರತದಲ್ಲಿ ಈಗ ಮೊಕ್ಕದ್ದಮೆಗಳ ಸ್ವರೂಪ ಬದಲಾಗಿದೆ. ಸಿವಿಲ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಸೈಬರ್‌ ಅಪರಾಧದಂತಹ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವೃತ್ತಿಯು ಸಾಂಪ್ರದಾಯಿಕ ಹಾಗೂ ರೂಪಾಂತರದ ಕವಲು ದಾರಿಯಲ್ಲಿ ನಿಂತಿದೆ. ಈ ಹಿಂದೆ ಜಗಳಗಳು ಪಂಚಾಯ್ತಿ- ಹಿರಿಯರ ಹಂತದಲ್ಲಿಯೇ ಬಗೆಹರಿಯುತ್ತಿದ್ದವು. ನ್ಯಾಯಾಲಯ ಕೊನೆಯ ಆಯ್ಕೆ ಆಗಿತ್ತು. ಆದರೀಗ ಆಸ್ತಿ, ಕೌಟುಂಬಿಕ ವಿಚಾರ ಮಾತ್ರವಲ್ಲ ಗ್ರಾಹಕ ಹಕ್ಕುಗಳು, ಮಹಿಳಾ ಹಕ್ಕು, ಶಿಕ್ಷಣ, ಉದ್ಯೋಗ, ಡಿಜಿಟಲ್ ಗೌಪ್ಯತೆಗೂ ಜನ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಜನರಲ್ಲಿ ಮೂಡಿದ ಕಾನೂನು ಶಿಕ್ಷಣ. ಹೀಗಾಗಿ ವಕೀಲ ವೃತ್ತಿಗೆ ಬರುವವರು ಕೌಶಲ್ಯ ಬೆಳೆಸಿಕೊಳ್ಳಬೇಕೆಂದರು.

ಎಐ ತಂತ್ರಜ್ಞಾನ:

ವಕೀಲರು ಸಾಂಪ್ರದಾಯಿಕ ಸಂಶೋಧನೆ ವಿಧಾನಗಳ ಮೇಲೆ ಅವಲಂಬಿತರಾಗುವ ಬದಲು ಎಐ ಚಾಲಿತ ಹೊಸ ಪರಿಕರಗಳನ್ನು ಬಳಸಲು ಕೌಶಲ್ಯ, ಸಾಮರ್ಥ್ಯ ಹೊಂದುವುದು ಅತ್ಯಗತ್ಯ ಎಂದ ನ್ಯಾಯಮೂರ್ತಿಗಳು, ನ್ಯಾಯದಾನ ವಿಳಂಬ, ಬಾಕಿ ಪ್ರಕರಣಗಳ ಹೆಚ್ಚಳ ಜನರ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಕಾನೂನಿನಲ್ಲಿಯೂ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಒಳಗೊಳ್ಳುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂದು ಎಐ, ಡಿಜಿಟಲ್ ಮಾಧ್ಯಮಗಳು ಕಾನೂನು ಜಗತ್ತನ್ನು ಪುನರ್ ರೂಪಿಸುತ್ತಿವೆ. ಹೀಗಾಗಿ ವಿಮರ್ಶಾತ್ಮಕ ಚಿಂತನೆ, ಸಾಮರ್ಥ್ಯ ವೃದ್ಧಿಗೆ ಎಐ ಬಗ್ಗೆ ತಿಳಿದುಕೊಳ್ಳುವುದು ತೀರ ಅಗತ್ಯ ಎಂದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾತನಾಡಿ, ವಕೀಲ ವೃತ್ತಿಗೆ ಬರುವವರು ಸತ್ಯ, ನ್ಯಾಯ, ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಕಾನೂನು ಪದವಿ ಎಂಬುದು ಬರೀ ಪದವಿ ಅಲ್ಲ. ಅದು ಸಮಾಜದ ಆತ್ಮ. ಮಾರ್ಗದರ್ಶಕ ಶಕ್ತಿ ಹೊಂದಿದೆ. ಇಂದು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನ್ಯಾಯದಾನ ವಿಳಂಬವಾಗಬಾರದು. ವಿಳಂಬವಾಗಿ ಸಿಕ್ಕ ನ್ಯಾಯದಿಂದ ಫಲವಿಲ್ಲ. ಇದನ್ನು ವೃತ್ತಿಪರರು ಗಮನದಲ್ಲಿ ಇಟ್ಟುಕೊಳ್ಳಬೇಕು. ಸುಲಭ ಹಾಗೂ ಸರಳವಾಗಿ ನ್ಯಾಯವೊದಗಿಸಲು ಪ್ರಯತ್ನಿಸಬೇಕು ಎಂದರು.

ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು, ಕುಲಸಚಿವರಾದ ಡಾ. ರತ್ನಾ ಭರಮಗೌಡರ್, ಗೀತಾ ಕೌಲಗಿ ಇದ್ದರು.

ಕಾನೂನು ವೃತ್ತಿ ವ್ಯಾಪಾರದ ವಸ್ತುವಲ್ಲ. ಸಮಾಜ ಸೇವೆ, ವ್ಯಾಜ್ಯಮುಕ್ತ ಸಮಾಜ ನಿರ್ಮಾಣಕ್ಕೆ ಇದ್ದು, ನ್ಯಾಯವಾದಿಗಳು ಈ ಬಗ್ಗೆ ಸಂಕಲ್ಪ ತೊಡಬೇಕು. ಸಮಾಜದ ಕಲ್ಯಾಣಕ್ಕಾಗಿ, ದುರ್ಬಲರ ಮತ್ತು ನ್ಯಾಯ ವಂಚಿತರ ಹಕ್ಕುಗಳನ್ನು ರಕ್ಷಿಸಲು ಯುವ ವಕೀಲರ ಜ್ಞಾನ ಬಳಕೆ ಆಗಬೇಕು. ಕಾನೂನು ಪದವಿ ಪಡೆದವರಿಂದ ಸಮಾಜವು ಇದನ್ನೇ ಬಯಸುತ್ತದೆ. ತರಗತಿಯಲ್ಲಿ ಪಡೆದ ಜ್ಞಾನವನ್ನು ನ್ಯಾಯಾಲಯದ ಕೊಠಡಿಯಲ್ಲಿ ಬಳಸಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವಾಗಲಿ.

ಎಚ್.ಕೆ. ಪಾಟೀಲ, ಕಾನೂನು ಸಚಿವಕಾನೂನು ವೃತ್ತಿಪರರಾಗುವ ನೀವು ಹಣದ ಹಿಂದೆ ಹೋಗಬೇಡಿ. ನ್ಯಾಯದ ಬೆನ್ನು ಬೀಳಬೇಕು. ಕಠಿಣ ಪರಿಶ್ರಮಪಟ್ಟರೆ ಯಶಸ್ಸು ನಿಶ್ಚಿತ. ಈ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಕಾನೂನು ವೃತ್ತಿ ಸುಲಭವಲ್ಲ. ಇಲ್ಲಿ ನಿರಂತರ ಓದು, ಮೌಲ್ಯಗಳು ಬೇಕು. ಬದಲಾದ ಕಾನೂನುನನ್ನು ತಿಳಿದುಕೊಂಡು ನಡೆಯುವ ಕೌಶಲ್ಯ ಬೇಕು. ಗೆಲ್ಲುವ ವಿಶ್ವಾಸ ನಿಮ್ಮಲ್ಲಿ ಮೂಡಬೇಕು.

ವಿ. ಸುಧೇಶ ಪೈ, ಬೆಂಗಳೂರಿನ ಹಿರಿಯ ನ್ಯಾಯವಾದಿ

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ