ಕನ್ನಡಪ್ರಭ ವಾರ್ತೆ ಮೂಡಲಗಿ
ಮಂಗಳವಾರ ಪಟ್ಟಣದ ಕೋರ್ಟ್ ಆವರಣದಲ್ಲಿ ಮೂಡಲಗಿ ನ್ಯಾಯವಾದಿ ಸಂಘದ ಸದಸ್ಯರು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗೆ ಉಳಿದು ಪ್ರತಿಭಟನೆ ನಡೆಸುತ್ತ ರಾಜ್ಯ ರೈತ ಸಂಘಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ ₹5,500 ನೀಡಬೇಕೆಂಬ ರೈತರ ಹೋರಾಟ ಸಮಂಜಸವಾಗಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಅಡಿಹುಡಿ ಹಾಗೂ ಕಾರ್ಯದರ್ಶಿ ಎಸ್.ಬಿ.ತುಪ್ಪದ ಮಾತನಾಡಿ, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಿ, ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯ ರೈತ ಸಂಘಟನೆ ಪರ ನಮ್ಮ ನ್ಯಾಯವಾದಿಗಳ ಸಂಘ ಸದಾ ಇದ್ದು, ಹೋರಾಟ ಸಮಯದಲ್ಲಿ ರೈತರ ಮೇಲೆ ಏನಾದರೂ ಕೇಸ್ ಗಳು ದಾಖಲಾದರೆ ನಾವು ಉಚಿತವಾಗಿ ವಕಾಲತ್ತು ವಹಿಸಲು ಸಿದ್ಧ ಎಂದು ಭರವಸೆ ನೀಡಿದರು.ನ್ಯಾಯವಾದಿ ಸಂಘದ ಸಹ ಕಾರ್ಯದರ್ಶಿಗಳಾದ ಆರ್.ಬಿ ಮುಂಡಿಗನಾಳ, ವಿನೋದ ಪಾಟೀಲ್ ಹಾಗೂ ಎಸ್.ಎಸ್.ತುಪ್ಪದ ಮಾತನಾಡಿ, ಕಬ್ಬಿನ ಬೆಲೆ ನಿಗದಿ ವಿಷಯದಲ್ಲಿ ಕೇಂದ್ರದ ಎಫ್.ಆರ್.ಪಿ ಮಾತ್ರವಲ್ಲದೆ, ರಾಜ್ಯ ಸರ್ಕಾರದ ಎಸ್.ಎ.ಪಿ ಕೂಡ ಮಹತ್ವದ್ದಾಗಿದೆ. ರೈತರ ಉತ್ಪಾದನಾ ವೆಚ್ಚ, ಮಾರುಕಟ್ಟೆ ಪರಿಸ್ಥಿತಿ ಮತ್ತು ಸಕ್ಕರೆ ಉದ್ಯಮದ ಆರ್ಥಿಕ ಸ್ಥಿತಿ ಪರಿಗಣಿಸಿ ಸರ್ಕಾರಗಳು ರೈತರಿಗೆ ಅನುಕೂಲವಾಗುವಂತಹ ದರ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಮೂಡಲಗಿ ನ್ಯಾಯವಾದಿ ಸಂಘದ ಪದಾಧಿಕಾರಿಗಳು, ಸದಸ್ಯರು, ನ್ಯಾಯವಾದಿಗಳು ಸೇರಿದಂತೆ ಸ್ಥಳೀಯರು ಹಾಗೂ ರೈತರು ಉಪಸ್ಥಿತರಿದ್ದರು.