ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಮೈಸೂರು ಉದಯಗಿರಿ ಸಂಬಂಧ ಕಾಂಗ್ರೆಸ್ ಪಕ್ಷದ ವಕ್ತಾರ ವಿ. ಲಕ್ಷ್ಮಣ್ ಹೇಳಿಕೆ ತೀವ್ರ ಖಂಡನೀಯ ಭಾರತೀಯ ಜನತಾ ಪಕ್ಷದ ವಿರಾಜಪೇಟೆ ಮಂಡಲದ ವಕ್ತಾರರಾದ ಚೆಪ್ಪುಡಿರ ರಾಕೇಶ್ ದೇವಯ್ಯ ಹೇಳಿದ್ದಾರೆ.ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಸಂದರ್ಭದಲ್ಲಿ ರೊಚ್ಚಿಗೆದ್ದ ಗಲಭೆಕೋರರಿಂದ ನಡೆದ ಕಲ್ಲು ತೂರಾಟದ ಬಗ್ಗೆ ಕೊಡಗು ಮೈಸೂರು ಲೋಕಸಭಾ ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ವಿ ಲಕ್ಷ್ಮಣ್ ಅವರು ಈ ಗಲಭೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದ ಕೈವಾಡವಿದೆ ಎಂದು ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆ ತೀವ್ರ ಖಂಡನೀಯ ಹಾಗೂ ಹಾಸ್ಯಸ್ಪದ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಗುಲಗಂಜಿಯಷ್ಟು ಅರಿವಿಲ್ಲದ ವಿ ಲಕ್ಷ್ಮಣ್ ಕಪೋಲ ಕಲ್ಪಿತ ಹಾಗೂ ದುರುದ್ದೇಶ ಅಡಗಿದೆ. ಈ ಹೇಳಿಕೆ ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರಲಿ ದ್ದು ಸರ್ಕಾರ ಇವರ ಮೇಲೆ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.ಕೊಡಗು ಜಿಲ್ಲಾ ಭಾಜಪ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ವಿ ಲಕ್ಷ್ಮಣ್ ಅವರು ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ತಿಳಿದುಕೊಂಡು ಮಾತನಾಡಿದರೆ ಒಳ್ಳೆಯದು. 1925 ರಿಂದ ಪ್ರಾರಂಭವಾಗಿ ಇಂದು ಶತಮಾನೋತ್ಸವದ ಸಂಭ್ರಮದಲ್ಲಿದೆ. 1962 ರ ಮಹಾಯುದ್ಧದ ಸಂದರ್ಭದಲ್ಲಿ ಆರ್ ಎಸ್ ಎಸ್ ಮಾಡಿದ ಅಮೋಘ ಸೇವೆಯನ್ನು ಪ್ರಶಂಶಿಸಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದು ಕಾಂಗ್ರೆಸ್ ಪಕ್ಷದ ವಕ್ತಾರ ಲಕ್ಷ್ಮಣ್ ಅವರಿಗೆ ಮಾಹಿತಿ ಇರಬೇಕಲ್ಲವೇ? ಎಂದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಾಮಾಜಿಕ ಜಾಲ ತಾಣ ಸಂಚಾಲಕ ಚಿರಿಯಪಂಡ ಸಚಿನ್ ಪೆಮ್ಮಯ್ಯ ಹಾಗೂ ವಿರಾಜಪೇಟೆ ಬಾಜಪ ಮಂಡಲದ ತಾಲೂಕು ಸಂಚಾಲಕ ಚಂಗುಲಂಡ ಸಂಪತ್ ಉಪಸ್ಥಿತರಿದ್ದರು.