ಯಲ್ಲಾಪುರ: ಮದ್ಯವರ್ಜನ ಶಿಬಿರದ ಮೂಲಕ ದುಶ್ಚಟಗಳಿಂದ ಹೊರಬಂದು ಉತ್ತಮ ಜೀವನ ರೂಪಿಸಿಕೊಂಡಿರುವುದು ಸಂತೋಷದ ಸಂಗತಿ. ನವಜೀವನವು ನಿರಂತರ ಪಯಣವಾಗಿದ್ದು, ಯಾವುದೇ ಸಂಕಷ್ಟ ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ದುಶ್ಚಟಮುಕ್ತ ಜೀವನವನ್ನು ಮುಂದುವರಿಸಬೇಕು ಎಂದು ೨೧೧೪ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುರುಳೀಧರ ಹೆಗಡೆ ಹೇಳಿದರು.
೨೧೧೪ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿ ನವಜೀವನದತ್ತ ಹೆಜ್ಜೆ ಇಟ್ಟ ೬೩ ನವಜೀವನ ಸಮಿತಿ ಸದಸ್ಯರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ತಾಲೂಕು ಯೋಜನಾಧಿಕಾರಿ ಸಂತೋಷ ಮಾತನಾಡಿ, ನವಜೀವನ ಕಾರ್ಯಕ್ರಮವು ಕೇವಲ ಮದ್ಯಪಾನ ತ್ಯಜಿಸುವ ಕಾರ್ಯಕ್ರಮವಲ್ಲ. ದುಶ್ಚಟಗಳಿಂದ ಮುಕ್ತರಾಗಿ ಉತ್ತಮ ಆರೋಗ್ಯ, ನೆಮ್ಮದಿಯ ಕುಟುಂಬ ಜೀವನ ಹಾಗೂ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ನೀಡುವ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.ಶಿರಸಿ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ಮದ್ಯಪಾನ ಹಾಗೂ ಇತರ ದುಶ್ಚಟಗಳು ವ್ಯಕ್ತಿಯ ಆರೋಗ್ಯದ ಜತೆಗೆ ಕುಟುಂಬದ ಆರ್ಥಿಕ ಸ್ಥಿತಿ, ಮಕ್ಕಳ ಭವಿಷ್ಯ ಹಾಗೂ ಸಾಮಾಜಿಕ ಗೌರವದ ಮೇಲೂ ದುಷ್ಪರಿಣಾಮ ಬೀರುತ್ತವೆ. ದುಶ್ಚಟಗಳಿಂದ ಹೊರಬಂದು ಹೊಸ ಬದುಕು ಕಟ್ಟಿಕೊಂಡಿರುವ ನವಜೀವನ ಸದಸ್ಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನವಜೀವನ ಸಮಿತಿ ಸದಸ್ಯರು, ಕುಟುಂಬದ ಸದಸ್ಯರು, ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.