ವಾಜಪೇಯಿ ತತ್ವ ನಿಷ್ಠ ನಾಯಕ: ಸಚಿವ ಸೋಮಣ್ಣ

KannadaprabhaNewsNetwork |  
Published : Dec 27, 2024, 12:45 AM IST
ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸಚಿವ ಸೋಮಣ್ಣ | Kannada Prabha

ಸಾರಾಂಶ

ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಸಂಪತ್ಭರಿತ ರಾಷ್ಟ್ರವನ್ನಾಗಿ ಮಾಡಲು ತಮ್ಮದೇ ಆದ ಕನಸು ಹೊಂದಿದ್ದರು, ಅವರು ಪ್ರಧಾನಿಯಾಗಿ ತಮ್ಮ ಕನಸಿನ ಭಾರತದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಸಂಪತ್ಭರಿತ ರಾಷ್ಟ್ರವನ್ನಾಗಿ ಮಾಡಲು ತಮ್ಮದೇ ಆದ ಕನಸು ಹೊಂದಿದ್ದರು, ಅವರು ಪ್ರಧಾನಿಯಾಗಿ ತಮ್ಮ ಕನಸಿನ ಭಾರತದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ಎ.ಬಿ. ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ಸುಶಾಸನ ದಿನ ಸಮಾರಂಭದಲ್ಲಿ ಸಚಿವ ಸೋಮಣ್ಣ, ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಈ ಮಹಾನ್ ನಾಯಕನ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಾವು ನಮ್ಮ ಕಾರ್ಯವೈಖರಿ ಹೇಗಿದೆ, ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುತ್ತಿದ್ದೇವೆಯೆ ಎಂದು ಚಿಂತನೆ ಮಾಡಬೇಕಾಗಿದೆ ಎಂದರು.ದೇಶದ ಅಭಿವೃದ್ಧಿಗೆ ವಾಜಪೇಯಿ ಅವರು ಜಾರಿಗೆ ತಂದ ಗ್ರಾಮ ಸಡಕ್, ನದಿಗಳ ಜೋಡಣೆ, ದೇಶದ ರೈತರ ಕಲ್ಯಾಣ, ಕೃಷಿ ಕ್ಷೇತ್ರದ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಯೋಜನೆಗೆ ಭದ್ರ ಅಡಿಪಾಯವಾಗಿವೆ. ವಿದೇಶಗಳೊಂದಿಗೆ ಹೇಗೆ ಬಾಂಧವ್ಯ ಬೆಳೆಸಬೇಕು, ಸಂಬಂಧ ಹೇಗೆ ಮಾಡಬೇಕು ಎಂಬ ಬಗ್ಗೆ ವಾಜಪೇಯಿ ಅವರು ವಿಶ್ವಕ್ಕೆ ಸಂದೇಶ ನೀಡಿದರು. ಸರಳ, ಸಜ್ಜನಿಕೆಗೆ ಹೆಸರಾದ ಇವರು ವಿಶ್ವ ಕಂಡ ಶ್ರೇಷ್ಠ ಜನನಾಯಕರಾಗಿ ಹೆಸರಾಗಿದ್ದಾರೆ. ಸೂರ್ಯ, ಚಂದ್ರ ಇರುವವರೆಗೂ ವಾಜಪೇಯಿ ಅವರು ಭಾರತದಲ್ಲಿ ಇರುತ್ತಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಗ್ವಾಲಿಯರ್‌ನಲ್ಲಿ 1924ರಲ್ಲಿ ಜನಿಸಿದ ವಾಜಪೇಯಿ ಅವರು ವಿದ್ಯಾರ್ಥಿ ದಿಸೆಯಲ್ಲೇ ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಬೆಳೆದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಇವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು. ಅಟಲ್ ಎಂದರೆ ಗುರಿ ಸಾಧಿಸುವವ, ಬಿಹಾರಿ ಎಂದರೆ ವಿವೇಚನಾಯುಕ್ತ, ಬಿಹಾರಿ ಎಂಬುದು ಅವರ ಕುಟುಂಬದ ಹೆಸರು. ವಾಜಪೇಯಿ ಅವರು ತಮ್ಮ ಹೆಸರಿಗೆ ತಕ್ಕಂತೆ ನಡೆದುಕೊಂಡರು. ತಮ್ಮ ಬುದ್ಧಿ ಸಾಮರ್ಥ್ಯದಿಂದ ಜಗತ್ತನ್ನೇ ಗೆದ್ದ ವ್ಯಕ್ತಿತ್ವ ಅವರದ್ದು ಎಂದು ಹೇಳಿದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ ಸುಭದ್ರ ಭಾರತಕ್ಕೆ ವಾಜಪೇಯಿ ಅವರು ನೀಡಿದ ಯೋಜನೆಗಳು, ಅವರ ದೂರದೃಷ್ಟಿ ಆಡಳಿತ ದೇಶದ ಮುನ್ನಡೆಗೆ ತಳಹದಿಯಾಗಿದೆ. ಅವರ ಸಂಕಲ್ಪವನ್ನು ಸಾಕಾರಗೊಳಿಸುವತ್ತಾ ಪ್ರಧಾನಿ ಮೋದಿಯವರು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.

ಶಾಸಕ ಬಿ.ಸುರೇಶ್‌ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ನಾಗರತ್ನಮ್ಮ, ನಗರ ಬಿಜೆಪಿ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು, ರೈತಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ