ಕಲಬುರಗಿ ಕಣದಲ್ಲಿ ಪ್ರಚಾರಕ್ಕೆ ನಾಯಕರ ಹೊಸ ಸೂತ್ರ

KannadaprabhaNewsNetwork | Updated : Apr 13 2024, 02:11 PM IST

ಸಾರಾಂಶ

ಉರಿ ಬಿಸಿಲಿನಿಂದ ಬಚಾವ್ ಆಗಲು ಬೆಳಗ್ಗೆ, ಸಂಜೆ ವಾಯುವಿಹಾರ ತಾಣ, ಉದ್ಯಾನವನಗಳಲ್ಲಿ ಅಭ್ಯರ್ಥಿಗಳಿಂದ ಮತಯಾಚನೆ. ಅತ್ಯಧಿಕ ತಾಪ ದಾಖಲಾಗಿರುವ ಕಲಬುರಗಿಯಲ್ಲಿ ಬೆಳಗ್ಗೆ, ಸಂಜೆಯಷ್ಟೇ ಮತಯಾಚನೆ.

ಶೇಷಮೂರ್ತಿ ಅವಧಾನಿ

  ಕಲಬುರಗಿ :  ಇಡೀ ರಾಜ್ಯದಲ್ಲೇ ಅತೀ ಹೆಚ್ಚಿನ ಪ್ರಮಾಣಲ್ಲಿ ಉರಿ ಬಿಸಿಲಿನ ಉಪಟಳ ಕಂಡಿರುವ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಲೋಕ ಸಮರದಲ್ಲಿರುವ ಪ್ರಮುಖ ಪಕ್ಷಗಳ ಹುರಿಯಾಳುಗಳು ತಮ್ಮ ಪ್ರಚಾರದ ವರಸೆ, ಮತಯಾಚನೆಯ ಸಮಯ, ಸಭೆ- ಸಮಾರಂಭಗಳನ್ನು ಯೋಜಿಸುವ ಶೈಲಿಯನ್ನೇ ಬದಲಿಸಿಕೊಂಡಿದ್ದಾರೆ.

ದಶಕದಲ್ಲೇ ಅತೀ ಹೆಚ್ಚಿನ ತಾಪಮಾನ ಕಳೆದ ಒಂದು ವಾರದಿಂದ ಕಲಬುರಗಿಯಲ್ಲಿ ದಾಖಲಾಗುತ್ತಿದೆ. ಗರಿಷ್ಠ 44. 7 ಡಿಗ್ರಿ ಸೆಲ್ಸಿಸ್‌ ತಾಪ ದಾಖಲಾಗಿರುವ ಈ ಲೋಕಸಭೆ ಕಣದಲ್ಲಿರುವ ಹುರಿಯಾಳುಗಳು ಪ್ರಚಾರಕ್ಕೆ ಸೂರ್ಯೋದಕ್ಕೂ ಮುನ್ನ, ಸೂರ್ಯಾಸ್ತದ ನಂತರ ಎಂಬ ಹೊಸ ಸೂತ್ರವನ್ನೇ ಕಂಡುಕೊಂಡಿದ್ದಾರೆ.

ವಾಯುವಿಹಾರ ಸಮಯದಲ್ಲೇ ಬಿರುಸಿನ ಪ್ರಚಾರ:   ಕಲಬುರಗಿಯಲ್ಲಂತೂ ಅಭ್ಯರ್ಥಿಗಳು ಬೆಳಗಿನ ವಾಯುವಿಹಾರ ಸಮಯವನ್ನೇ ಮತಯಾಚನೆಗೆ ಪ್ರಶಸ್ತ ಸಮಯವೆಂದು ಅರಿತು ಅದೇ ಹೊತ್ತಲ್ಲೇ ನಗರ ಸಂಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರದಲ್ಲಿರುವ ರಿಂಗ್‌ರಸ್ತೆ ಗುಂಟ ಇರುವ ಥೀಮ್‌ ಪಾರ್ಕ್‌, ಉದನೂರ್‌ ಕ್ರಾಸ್‌ನ ವಾಯುವಿಹಾರದ ಬಯಲು, ಎಂಎಸ್‌ಕೆ ಮಿಲ್‌ ಮೈದಾನ, ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣ, ವಿಶ್ವ ವಿದ್ಯಾಲಯ ಮೈದಾನ ಸೇರಿದಂತೆ ವಾಯು ವಿಹಾರಕ್ಕೆಂದು ಮಹಿಳೆಯರು, ಪುರುಷರು ಅತ್ಯಧಿಕ ಸಂಖ್ಯೆಯಲ್ಲಿ ಸೇರುವ ಈ ಸ್ಥಳದಲ್ಲಿ ಅದಾಗಲೇ ಸುತ್ತಾಡುತ್ತ ಪ್ರಚಾರ ಆರಂಭಿಸಿದ್ದಾರೆ.

ಕಾಂಗ್ರೆಸ್‌ ಹುರಿಯಾಳು ರಾಧಾಕೃಷ್ಣ ದೊಡ್ಮನಿಯವರಂತೂ ಶಾಸಕ ಅಲ್ಲಂಪ್ರಭು ಪಾಟೀಲರೊಂದಿಗೆ ಉದನೂರ್‌ ರಸ್ತೆಯ ವಾಯುವಿಹಾರ ತಾಣದಲ್ಲಿ ಕಳೆದ 2 ದಿನದಿಂದ ಬೆಳಗಿನ ಹೊತ್ತಲ್ಲೇ ಬಿರುಸಿನ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ. ಇನ್ನು ಬಿಜೆಪಿ ಹುರಿಯಾಳು ಡಾ. ಉಮಶ ಜಾಧವ್‌ ಬೆಳಗ್ಗೆ, ಸಂಜೆ ಹೊತ್ತು ವಾಯುವಿಹಾರ ತಾಣಗಳನ್ನೇ ಕೇಂದ್ರೀಕರಿಸಿ ತಮ್ಮ ಪ್ರಚಾರಕ್ಕೆ ಮುಂದಾಗಿದ್ದಾರೆ. ತಮ್ಮ ಹೋಬಳಿ, ಶಕ್ತಿ ಕೇಂದ್ರದ ಸಭೆಗಳನ್ನೂ ಬೆಳಗ್ಗೆಯೇ ಹಮ್ಮಿಕೊಳ್ಳುತ್ತಿದ್ದಾರೆ. ನಂತರ ಸಂಜೆ 5 ಗಂಟೆಯ ನಂತರವಷ್ಟೇ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.

ಮಜ್ಜಿಗೆ, ಪಾನಕ, ಟೋಪಿ, ಛತ್ರಿ, ಕರವಸ್ತ್ರ ವಿತರಣೆ

ಇನ್ನು ಸಮಾವೇಶಗಳು ಕೂಡಾ ಬೇಗನೆ ಶುರುವಾಗುತ್ತಿರೋದು ವಿಶೇಷ. ಸಾಮಾನ್ಯವಾಗಿ ಮಧ್ಯಾಹ್ನವಾದರೂ ಶುರುವಾಗದೆ ಜನರನ್ನು ಕಾಯಿಸುತ್ತಿದ್ದ ರಾಜಕಾರಣಿಗಳು ಇದೀಗ ಜನ ಬರುವ ಮೊದಲೇ ಸಮಾವೇಶದ ವೇದಿಕೆಯಲ್ಲಿ ರಾರಾಜಿಸುತ್ತ ಜನರಿಗಾಗಿ ಕಾಯುವಂತಾಗಿದೆ.

ಇದಲ್ಲದೆ ಸಂಘಟಕರು ಜನರನ್ನು ಕೆಲ ಹೊತ್ತು ಕೂಡಿಡಲು ತಂಪಾದ ಮಜ್ಜಿಗೆ, ಐಸ್‌ಕ್ರೀಂ, ನೀರು, ಶರಬತ್‌, ಪಾನಕಗಳನ್ನು ವಿತರಿಸುವ ಮೂಲಕ ಉರಿ ಬಿಸಿಲಲ್ಲಿ ಮತಯಾಚನೆಗೆ ಹೀಗೆಲ್ಲಾ ಹೊಸ ದಾರಿಗಳಲ್ಲಿ ಸಾಗುತ್ತಿದ್ದಾರೆ.

ಉಭಯ ಪಕ್ಷಗಳು ಟೋಪಿ, ಬೆಳ್ಳಗಿನ ಟೀ ಶರ್ಟ್‌ನಂತಹ ಚುನಾವಣಾ ಸಾಮಗ್ರಿ ಸಿದ್ಧಪಡಿಸಿಕೊಂಡು ಪ್ರಚಾರದಲ್ಲಿ ಜನರಿಗೆ ಹಂಚುತ್ತಿದ್ದಾರೆ. ಇದರಿಂದಾಗಿ ಜನರಿಗೆ ರಕ್ಷಣೆಯೂ ಆಯ್ತು, ಪಕ್ಷದ, ಚಿಹ್ನೆಯ ಪ್ರಚಾರವೂ ಆಯ್ತು ಎಂದು ಬಿಸಿಲಿನಿಂದ ರಕ್ಷಣೆಗಿರುವ ಟೋಪಿ, ಛತ್ರಿ, ಕರವಸ್ತ್ರಗಳಂತಹ ಪರಿಕರಗಳನ್ನೇ ಹೆಚ್ಚು ಸಿದ್ಧಪಡಿಸಿ ಹಂಚಲಾಗುತ್ತಿದೆ.

Share this article