ಕನ್ನಡಪ್ರಭ ವಾರ್ತೆ ಚಾಮರಾಜನಗರರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಕೈ ಬಿಟ್ಟು ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರದಲ್ಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್ ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ 8 ತಿಂಗಳಿಂದ ವಿದ್ಯುತ್ ಸರಬರಾಜು ನಿಗಮಗಳ ಮುಂದೆ ರಾಜ್ಯಾದ್ಯಂತ ಕೃಷಿಕರು ನಿರಂತರ ಚಳವಳಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಆರ್ ನಂಬರ್‌ಗೆ ಆಧಾರ್ ನಂಬರ್ ಲಿಂಕ್ ಮಾಡಿ ಖಾಸಗೀಕರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದೆ. ಈ ಹಿಂದೆ ಟಿಸಿ ಅಳವಡಿಕೆಗೆ ತಗಲುವ ವೆಚ್ಚವನ್ನು ಇಲಾಖೆಯೇ ಭರಿಸುತ್ತಿತ್ತು. ಆದರೆ ಈಗ ಅದನ್ನು ರೈತರೇ ಕಟ್ಟಬೇಕು ಎನ್ನುವುದು ಸರಿಯಲ್ಲ. ಕೃಷಿ ಉತ್ಪನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಸೋಲಾರ್ ಪಂಪ್‌ಸೆಟ್ ಹಾಕಿಕೊಂಡಂತಹ ರೈತರಿಗೆ ವಿದ್ಯುತ್ ಸಂಪರ್ಕ ಕೂಡ ಮಾಡುವ ನಿಯಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಜಿಲ್ಲಾ ಉಪಾಧ್ಯಕ್ಷ ಮಲೆಯೂರು ಪ್ರವೀಣ್, ಉಡಿಗಾಲ ಗ್ರಾಮ ಘಟಕ ಅಧ್ಯಕ್ಷ ಮಂಜುನಾಥ್, ಸಂಘದ ಪದಾಧಿಕಾರಿಗಳಾದ ರಾಜು, ಅಶೋಕ್, ಶ್ರೀಕಂಠ, ಬಸವರಾಜಪ್ಪ, ರಘು, ಸುನೀಲ್, ವೆಂಕಟರಾಮು, ಬಸವಣ್ಣ, ಮಹದೇವಸ್ವಾಮಿ, ಮಹೇಶ್, ಶಿವು, ಹರೀಶ್, ಕೀರ್ತಿ, ಮಂಜು ಸೇರಿದಂತೆ ಇತರರು ಭಾಗವಹಿಸಿದ್ದರು.