ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯನವರ ಮೇಲೆ ನಾಯಕ ಸಮಾಜದವರನ್ನು ಎತ್ತಿ ಕಟ್ಟುವ ಕೆಲಸ ವ್ಯವಸ್ತಿತವಾಗಿ ನಡೆಸಲಾಗುತ್ತಿದೆ ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು. ಇಲ್ಲಿನ ಕುರುಬರ ಹಾಸ್ಟೆಲ್‌ನಲ್ಲಿ ಕರೆಯಲಾಗಿದ್ದ ಸಮಾಜ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್ಟಿ ಮೀಸಲಾತಿಗೆ ಕುರುಬರ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಅಂಶ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ. ಕುರುಬ ಸಮಾಜ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದರು. ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ತಾವು ಪಾದಯಾತ್ರೆ ನಡೆಸಿದಾಗ ಅಂದಿನ ಸಚಿವ ಆರ್.ಅಶೋಕ್ ಮನವಿ ಪಡೆದು ನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕೆಲವು ಅಂಕಿ ಅಂಶಗಳು ಬೇಕೆಂದು ಪ್ರಸ್ತಾವನೆ ಹಿಂದಕ್ಕೆ ಕಳಿಸಲಾಗಿತ್ತು. ಗುಲ್ಬರ್ಗ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಕುರುಬರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದನ್ನೆ ದೊಡ್ಡ ಪ್ರಮಾದವನ್ನಾಗಿ ಮಾಡಿ ಕುರುಬರನ್ನು ಎಸ್ಟಿಗೆ ಸೇರಿಸಲು ಹುನ್ನಾರ ನಡೆಸುತ್ತಿದ್ದಾರೆಂಬ ಕೂಗು ಕೇಳಿ ಬಂದಿತು. ಕುರುಬರು ಹಾಲು ಮತಸ್ಥರೆಂದು ಸುಳ್ಳು ಜಾತಿ ಸರ್ಟಿಫಿಕೇಟ್‍ಗಳನ್ನು ತೆಗೆದುಕೊಳ್ಳುತ್ತಿದ್ದಾರೆಂಬ ಆಪಾದನೆ ನಮ್ಮ ಜನಾಂಗದ ಮೇಲಿದೆ ಎಂದರು. ಕಾಂತರಾಜ್ ಆಯೋಗದ ವರದಿಯನ್ನು 60 ಪ್ರಬಲ ಶಾಸಕರುಗಳು ವಿರೋಧಿಸಿದರು. ಲಿಂಗಾಯಿತ ಸಮುದಾಯಗಳಲ್ಲಿ ಅನೇಕ ಪಂಗಡಗಳಿವೆ. ಅವರ ಸಮಸ್ಯೆಗಳನ್ನು ಸರ್ಕಾರದ ಮೇಲೆ ಹಾಕಿ ಮುಖ್ಯಮಂತ್ರಿಗಳ ತೇಜೋವಧೆ ಮಾಡಲಾಗುತ್ತಿದೆ. ಸೆ.22ರಿಂದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಗಣತಿಯಲ್ಲಿ ಕಡ್ಡಾಯವಾಗಿ ಕುರುಬ ಎಂದು ನಮೂದಿಸಬೇಕು. ಪರ್ಯಾಯ ಜಾತಿಗಳ ಪದನಾಮಗಳನ್ನು ಬರೆಸಬಾರದು. ಈ ಕುರಿತು ಕರಪತ್ರಗಳನ್ನು ಮುದ್ರಿಸಿ ಪ್ರತಿ ಹಳ್ಳಿಗಳಲ್ಲಿ ಹಂಚುವ ಮೂಲಕ ಕುರುಬ ಜನಾಂಗದವರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು. ನಮ್ಮ ಮಠದಿಂದ ಕಾಗಿನೆಲೆ ಗ್ರಾಮೀಣಾಭಿವೃದ್ಧಿ ಕೋ-ಆಪರೇಟಿವ್ ಸೊಸೈಟಿ ಆರಂಭಿಸುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ 150 ಷೇರು ಸಂಗ್ರಹಿಸುವ ಗುರಿಯಿದೆ. ಮಹಿಳೆಯರಿಗೆ ಒಂದು ಕೋಟಿ ರು.ಗಳವರೆಗೆ ಸಾಲ ನೀಡಿ ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿಸುವ ಉದ್ದೇಶವಿದೆ. ಇದಕ್ಕೆ ಕುರುಬ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.