ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಫೆ.೧೦ರಂದು ಲೀಗ್ ಮಾದರಿಯ ಅಂತರ್ ಜಿಲ್ಲಾ ಆಯ್ದ ತಂಡಗಳ ವಾಲಿಬಾಲ್ ಪಂದ್ಯ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಶರತ್ ಆಳ್ವ ಕೂರೇಲು ತಿಳಿಸಿದ್ದಾರೆ. ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ೮ ತಂಡಗಳು ಈ ಪಂದ್ಯದಲ್ಲಿ ಭಾಗವಹಿಸಲಿವೆ. ಸಂಜೆ ೪ ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸುವ ಮೂಲಕ ವಾಲಿಬಾಲ್ ಪ್ರೇಮಿಗಳಿಗೆ ರಸದೌತಣ ನೀಡಲಿದ್ದಾರೆ. ರಾತ್ರಿ ೮ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೨೫ ಸಾವಿರ ರುಪಾಯಿ ನಗದು ಹಾಗೂ ಟ್ರೋಫಿ, ದ್ವಿತೀಯ ತಂಡಕ್ಕೆ ೧೫ ಸಾವಿರ ರು. ನಗದು ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ ರುಪಾಯಿ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ೭ ಸಾವಿರ ರುಪಾಯಿ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಪಂದ್ಯಶ್ರೇಷ್ಠ ಪಡೆದ ತಂಡಕ್ಕೆ ನಗದು ಬಹುಮಾನ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಹೀರೊ ಸೈಕಲ್ ನೀಡಲಾಗುವುದು. ಆ ಮೂಲಕ ವಾಲಿಬಾಲ್ ಪಂದ್ಯವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಾಲಿಬಾಲ್ ಆಟಗಾರ ದಿ. ಅಖಿಲೇಶ್ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದೆ ಎಂದು ಶರತ್ ಆಳ್ವ ಹೇಳಿದರು. ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಡಿವೈಎಸ್ಪಿ ಅರುಣ್ ನಾಗೇಗೌಡ, ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತಿತರರು ಭಾಗವಹಿಸುವರು ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುತ್ತೂರು ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ಉಪಾಧ್ಯಕ್ಷ ಶಿವರಾಮ ಭಟ್ ಪೆರ್ಲಂಪಾಡಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಿ.ಆರ್., ಕೋಶಾಧಿಕಾರಿ ಗುಣಕರ ಶೆಟ್ಟಿ ಹಾಜರಿದ್ದರು.