ಕನ್ನಡಪ್ರಭ ವಾರ್ತೆ ದಾವಣಗೆರೆ
ಪದವಿ ಪಡೆದವರಿಗೆಲ್ಲಾ ನೌಕರಿ ಸಿಗುವುದಿಲ್ಲ. ಆದರೆ, ನೌಕರಿ ಹೊಂದಲು ಪೂರಕ ಕೌಶಲ್ಯಗಳನ್ನು ಕಲಿಕೆ ಜತೆಗೆ ರೂಢಿಸಿಕೊಂಡರೆ ರಾಜ್ಯ, ರಾಷ್ಟ್ರವಷ್ಟೇ ಅಲ್ಲ, ಜಾಗತಿಕ ಮಟ್ಟದ ಕಂಪನಿಗಳಲ್ಲೂ ಉದ್ಯೋಗ ಹೊಂದುವುದು ಕಷ್ಟವೇನಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲ ಸಚಿವ(ಆಡಳಿತ) ಆರ್. ಶಶಿಧರ್ ವಿದ್ಯಾರ್ಥಿಗಳಿಗೆ ತಿಳಿಸಿದರು.ನಗರದ ಎಆರ್‌ಎಂ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಐಕ್ಯೂಎಸಿ ಘಟಕದಿಂದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯ, ಬದುಕಿಗೆ ತಾವೇ ಮಾರ್ಗನಕ್ಷೆ ತಯಾರಿಸಿಕೊಳ್ಳಬೇಕು ಎಂದರು.
ಜಾಗತಿಕ ಮಟ್ಟದ ಕಂಪನಿಗಳು ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಪದವಿ ಜತೆಗೆ ತಮ್ಮ ಭವಿಷ್ಯದ ಹಾದಿಯನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು. ದೇಶದಲ್ಲಿ 10 ಸಾವಿರಕ್ಕೂ ಅಧಿಕ ಬ್ಯಾಂಕಿಂಗ್ ಪರೀಕ್ಷೆ ನಡೆಯುತ್ತವೆ. ಅವುಗಳ ಬಗ್ಗೆ ಸಂಪೂರ್ಣ ತಿಳಿದು, ಪೂರಕ ಸಿದ್ಧತೆ ಮಾಡಿಕೊಳ್ಳಬೇಕು. ಹೆಚ್ಚು ಓದುವ ಹವ್ಯಾಸ ಮೈಗೂಡಿಸಿಕೊಳ್ಳಿ. ಕನ್ನಡ, ಇಂಗ್ಲೀಷ್ ಯಾವುದಾದರೂ ಸರಿ, ಕನಿಷ್ಟ 50 ಪುಟ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಬಿ.ಜಿ. ಧನಂಜಯ ಮಾತನಾಡಿ, ಜಗತ್ತಿನ ಎಲ್ಲಾ ವ್ಯಸನಗಳಿಗೂ ಶಿಕ್ಷಣವೇ ಮದ್ದು. ಯುವ ಜನರು ಸಾಮಾಜಿಕ ಕಳಕಳಿಯ ಕಾರ್ಯ ಮಾಡಬೇಕು. ನಿಸ್ವಾರ್ಥತೆಯಿಂದ ಸಮಾಜ ಕಟ್ಟಬೇಕು. ಯುವಕರೆಂದರೆ ಬದಲಾವಣೆಯೆಂಬುದನ್ನು ಅರ್ಥ ಮಾಡಿಕೊಳ್ಳಿ. ಎಲ್ಲರೂ ಸೇರಿ, ದೇಶವನ್ನು ಮುನ್ನಡೆಸಬೇಕು. ಇಂದಿನ ಕೆಲ ಯುವಕರು ಹೆತ್ತವರಿಗೂ ಗೊತ್ತಿಲ್ಲದ ಹಾಗೆ ಕೆಟ್ಟಕೆಲಸ ಮಾಡುತ್ತಾರೆ. ಇಂತಹದ್ದು ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಸ್ಪರ್ಧಾತ್ಮಕವಾದ ಇಂದಿನ ಯುಗದಲ್ಲಿ ಅನೇಕ ಪರೀಕ್ಷೆಗಳು ನಿರಂತರ ನಡೆಯುತ್ತವೆ. ಯುವಕರು ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗಮನ ಕೇಂದ್ರೀಕರಿಸಬೇಕು. ಓದುವುದರಿಂದ ನಮ್ಮೊಳಗಿನ ಅಜ್ಞಾನ ಹೊರಗೆ ಹೋಗಿ, ಜ್ಞಾನ ಬಂದು ಕೂಡುತ್ತದೆ. ಒಳಗಡೆ ಒಳ್ಳೆಯ ವಿಚಾರಗಳು ತುಂಬಿಕೊಳ್ಳುತ್ತವೆ. ನಾವು ಕನ್ನಡಿ ಮುಂದೆ ನಿಂತಾಗ ನಾನು ತುಂಬಾ ಚನ್ನಾಗಿದ್ದೇನೆ ಅಂತಾ ಆತ್ಮವಿಶ್ವಾಸದಿಂದ ಹೇಳಿ, ಮುನ್ನಡೆದರೆ ಜೀವನದಲ್ಲಿ ಮುಂದೆ ಸಾಗಬಹುದು ಎಂದು ಪ್ರೇರೇಪಿಸಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರೊ. ಎನ್.ಲಿಂಗಣ್ಣ ಮಾತನಾಡಿ, ಗುರು, ಹಿರಿಯರು ಹೇಳಿದ ಮಾತುಗಳನ್ನು ವಿದ್ಯಾರ್ಥಿ, ಯುವ ಜನರು ಕೇಳಬೇಕು. ಬರೀ ಪದವಿ ಗಳಿಸುವುದಷ್ಟೇ ಮುಖ್ಯವಲ್ಲ. ಕೌಶಲ್ಯಗಳನ್ನೂ ಕಲಿಯಬೇಕು. ಕೌಶಲ್ಯಗಳನ್ನು ಕಲಿಸುವ ವ್ಯವಸ್ಥೆಯನ್ನು ಸರ್ಕಾರಗಳು, ವಿಶ್ವ ವಿದ್ಯಾನಿಲಯಗಳೂ ಮಾಡಬೇಕು. ವೃತ್ತಿ ಪರ ಕೋರ್ಸ್ ಹೆಚ್ಚಿಸಬೇಕು.ಆಗ ಮಾತ್ರ ಭವಿಷ್ಯದಲ್ಲಿ ಸುಖ ಸಾಧ್ಯ ಎಂದರು.
ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಎಂ.ಡಿ. ಅಣ್ಣಯ್ಯ, ಎಡಿವಿಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಗಣಪತಿ, ಸೋಮಶೇಖರ.ಬಿ. ಕಿಚಡಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಡಿ. ಅಂಜಿನಪ್ಪ, ಎಂ.ಕಾಂ. ವಿಭಾಗ ಮುಖ್ಯಸ್ಥೆ ಸಿ.ಡಿ. ತ್ರಿವೇಣಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀನಿವಾಸ, ರಂಜಿತ ಕಿನ್ನಾಳ, ಬೋಧಕರಾದ ಜಿ. ನಾಗರಾಜ, ಡಾ. ಬಿ.ಸಿ. ರಾಕೇಶ, ಬಸವರಾಜ. ವಿ. ದಮ್ಮಳ್ಳಿ, ಮೊಹಮ್ಮದ್ ರಿಯಾಜ್, ಬಿ.ಸಿ. ಮನೋಹರ, ಟಿ.ಎನ್. ಮೌನೇಶ್ವರ, ಎಂ.ಎಸ್. ಮಂಜುಳಾ, ಗಣೇಶ, ಮಮತಾ, ಗೀತಾ ಪಾಟೀಲ, ಬೋಧಕೇತರ ಸಿಬ್ಬಂದಿಯಾದ ಷಣ್ಮುಖಪ್ಪ ಮುನಿಸಿದ್ದಳ್ಳವರ, ಫಕ್ಕೀರಪ್ಪ, ಶಂಭು ಕಾಯಕದ, ಬಿಎ, ಬಿಕಾಂ ವಿದ್ಯಾರ್ಥಿಗಳು ಇದ್ದರು. ಸಹನಾ, ಸಂಚನ, ಪ್ರೊ. ಕಾಡಜ್ಜಿ ಶಿವಪ್ಪ, ಡಾ. ಜಿ.ಎಸ್. ಮಧು ಮಾಲತಿ, ಎಚ್. ಶಾಂತನಾಯ್ಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಲ್ಲಿ ಸರಳತೆ, ಸನ್ನಡತೆ, ಶಿಸ್ತು, ಗೌರವ, ತಾಳ್ಮೆ, ಸಹನೆ ಮುಂತಾದ ಮೌಲ್ಯಗಳನ್ನು ರೂಢಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡ ಸದ್ಗುಣಗಳೇ ನಿಮ್ಮ ಜೀವನದುದ್ದಕ್ಕೂ ಶ್ರೀರಕ್ಷೆಯಾಗಿ ಕಾಯುತ್ತವೆಂಬ ಅರಿವು ಇರಲಿ.ಪ್ರೊ. ಎ. ಲಿಂಗಣ್ಣ, ಮಾಜಿ ಶಾಸಕರು.