ಬದುಕು ಅರ್ಥವಾಗಲು ಅಗತ್ಯ ಭಾಷೆ ಕಲಿಯಿರಿ: ರಂಗಕರ್ಮಿ ಕೆ.ವಿ.ಅಕ್ಷರ

KannadaprabhaNewsNetwork | Published : Jan 17, 2024 1:46 AM

ಸಾರಾಂಶ

ನಿತ್ಯ ಜೀವನದಲ್ಲಿ ಎಲ್ಲರೂ ಭಾಷೆಯನ್ನು ಬಳಸುತ್ತಾರೆ. ಆದರೆ ಬದುಕನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಭಾಷೆ ಕಲಿಯುವುದಿಲ್ಲ. ಬದುಕನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಭಾಷೆಯನ್ನು ಎಲ್ಲರೂ ಕಲಿಯಬೇಕು ಎಂದು ರಂಗಕರ್ಮಿ ಕೆ.ವಿ.ಅಕ್ಷರ ಸಾಗರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ನಿತ್ಯ ಜೀವನದಲ್ಲಿ ಎಲ್ಲರೂ ಭಾಷೆಯನ್ನು ಬಳಸುತ್ತಾರೆ. ಆದರೆ ಬದುಕನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಭಾಷೆ ಕಲಿಯುವುದಿಲ್ಲ. ಬದುಕನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಭಾಷೆಯನ್ನು ಎಲ್ಲರೂ ಕಲಿಯಬೇಕು ಎಂದು ರಂಗಕರ್ಮಿ ಕೆ.ವಿ.ಅಕ್ಷರ ಅಭಿಪ್ರಾಯಪಟ್ಟರು.

ತಾಲೂಕಿನ ಭೀಮನಕೋಣೆಯ ಶ್ರೀ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಶಿವಮೊಗ್ಗದ ಭಾ.ಮ. ಶಿಕ್ಷಣ ಮತ್ತು ಸಾಂಸ್ಕೃತಿಕ ವೇದಿಕೆ, ರಾಮನಿಲಯ ಕ್ರಿಯೇಷನ್ಸ್ ಸಂಸ್ಥೆ ಭಾನುವಾರ ಆಯೋಜಿಸಿದ್ದ ಲಕ್ಷ್ಮೀನಾರಾಯಣ ಕಾಶಿ ಬರೆದಿರುವ ಬದುಕಿಗೊಂದು ಭಾಷೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.

ಈ ಕೃತಿಯಲ್ಲಿ ಬದುಕಿಗೆ ಅಗತ್ಯವಾದ ಹಲವು ಮೌಲ್ಯಗಳನ್ನು ಕಟ್ಟಿಕೊಡಲಾಗಿದೆ. ಹಾಸ್ಯಪ್ರಜ್ಞೆ ಯ ಧ್ವನಿ ಈ ಕೃತಿಯಲ್ಲಿದೆ. ನಾನು ಮತ್ತು ನನ್ನತನ ಈ ಪುಸ್ತಕದಲ್ಲಿ ಕಂಡುಬರುತ್ತದೆ. ಸಾಮುದಾಯಿಕ ಚಿಂತನೆಯ ಉದಾಹರಣೆಗಳಿವೆ. ಆದರೆ ಹೀಗೆಯೇ ಇರಬೇಕು ಎನ್ನುವ ಬೋಧನೆ ಕಂಡುಬರುವುದಿಲ್ಲ ಎಂದು ವಿಶ್ಲೇಷಿಸಿದರು.

ಸಮುದಾಯಗಳು ಕಳೆದುಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಈ ಸಂದರ್ಭದಲ್ಲಿ ಒಂದು ವಿಷಯ ಸಾಮುದಾಯಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಸಾಮುದಾಯಿಕ ಚಿಂತನೆ ಆರೋಗ್ಯಕರವಾದುದು. ಕಾಶಿ ಅವರ ಈ ಕೃತಿಯಲ್ಲಿ ಇಂತಹ ಆರೋಗ್ಯಕರ ಕ್ರಮಗಳಿವೆ. ಇಲ್ಲಿನ ಲೇಖನಗಳಲ್ಲಿ ಸಿದ್ಧಾಂತಗಳಿಲ್ಲ. ಆದರೆ. ಹೊಳಹುಗಳಿವೆ ಎಂದು ಹೇಳಿದರು.

ಕೃತಿ ಬಿಡುಗಡೆಗೊಳಿಸಿದ ಹಿರಿಯ ವಿದ್ವಾಂಸ ಡಾ. ಜಿ.ಎಸ್. ಭಟ್ಟ ಮಾತನಾಡಿ, ಕೃತಿ ಪ್ರಕಾಶನ ಅತ್ಯಂತ ಸವಾಲಿನ ಕೆಲಸ. ಸಗಟು ಖರೀದಿಯಂತಹ ಲೇಖಕರ ಪರವಾದ ಉತ್ತಮ ಯೋಜನೆ ವಿಫಲವಾಗುತ್ತಿದೆ. ಲಕ್ಷ್ಮೀನಾರಾಯಣ ಕಾಶಿ ಅವರ ಈ ಕೃತಿಯನ್ನು ಅಕ್ಷರ ಪ್ರಕಾಶನ ಪ್ರಕಟಿಸಿದೆ. ಅಕ್ಷರ ಪ್ರಕಾಶನ ಸಂಸ್ಥೆಯಲ್ಲಿ ಕೃತಿ ಪ್ರಕಟ ಆಗುವುದು ಹಲವಾರು ಕಾರಣಗಳಿಂದಾಗಿ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಡಾ.ಜಯಪ್ರಕಾಶ ಮಾವಿನಕುಳಿ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಲಕ್ಷ್ಮೀನಾರಾಯಣ ಕಾಶಿ, ಡಾ.ಯಶೋಧ ಕಾಶಿ ಹಾಜರಿದ್ದರು. ಬಿ.ಎಚ್. ರಾಘವೇಂದ್ರ ಕಾಶಿ ದಂಪತಿಯನ್ನು ಅಭಿನಂದಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೂರ್ವಿ ಕಾಶಿ ಪ್ರಾರ್ಥಿಸಿದರು. ರವಿ ಕಾಶಿ ಸ್ವಾಗತಿಸಿದರು. ಕಿರಣ ನಿರೂಪಿಸಿದರು. ರಾಘವೇಂದ್ರ ಶರ್ಮಾ ವಂದಿಸಿದರು.

- - - -16ಕೆ.ಎಸ್.ಎ.ಜಿ.4:

Share this article