ಹಾನಗಲ್ಲ: ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಸಂಭ್ರಮದಿಂದ ಕೂಡಿರಬೇಕೆ ವಿನಃ ಭಯದ ವಾತಾವರಣದಿಂದ ಅಲ್ಲ, ಶಿಕ್ಷಕನ ಪ್ರವೇಶದಿಂದ ತರಗತಿ ಸದಾ ಉತ್ಸಾಹದಿಂದ ತುಂಬಿರಬೇಕು ಎಂದು ಸಿ.ಜಿ. ಬೆಲ್ಲದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಆರ್. ತಿಳಿಸಿದರು.
ಜೀವನ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ಮೇಲು, ಜೀವನ ಮತ್ತು ಪರೀಕ್ಷೆಗಳನ್ನು ಒಂದಕ್ಕೊಂದು ಹೋಲಿಸುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕೆಲವು ತಂತ್ರಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯ ಮತ್ತು ತಾಳ್ಮೆ ಮುಖ್ಯವೆಂದು ವಿವರಿಸುತ್ತಾ ಶಿಕ್ಷಕರು ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಕುರಿತು ಸ್ಫೂರ್ತಿದಾಯಕವಾದಂತಹ ಕೆಲವು ಸಲಹೆ ನೀಡಿದರು. ಶಿಕ್ಷಕನ ಕೆಲಸ ಜವಾಬ್ದಾರಿಯ ಪ್ರಶ್ನೆಯಾಗಿದೆ. ಒಬ್ಬ ಶಿಕ್ಷಕನು ಮಾಡಿದ ತಪ್ಪು ವಿದ್ಯಾರ್ಥಿಗಳ ನೂರಾರು ತಪ್ಪುಗಳಿಗೆ ಕಾರಣವಾಗಬಹುದು ಎಂದು ತಿಳಿಹೇಳಿದರು.
ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಡಾ. ಸದಾಶಿವಪ್ಪ ಎನ್. ಮಾತನಾಡುತ್ತಾ, ಸಮಾಜವನ್ನು ಬದಲಾಯಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಒಳ್ಳೆಯ ಶಿಕ್ಷಕನಾದರೆ ಮಾತ್ರ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಸಾಧ್ಯ, ಶಿಕ್ಷಕರಿಗೆ ಬೇಕಾದ ಗುಣಗಳು, ಉತ್ತಮ ದೀಕ್ಷಾ ವಿಧಾನಗಳು ಮತ್ತು ಸಮಾಜಕ್ಕೆ ಬೇಕಾದ ಸಕಾರಾತ್ಮಕ ಸೇವೆಗಳು, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು, ಅವರಲ್ಲಿ ಸೌಕರ್ಯಪೂರ್ಣ ಸಂವಹನ ಹಾಗೂ ನೈತಿಕತೆ ಬೆಳೆಸಬೇಕು ಎಂಬುದು ಅವರ ಮುಖ್ಯ ಸಂದೇಶವಾಗಿತ್ತು. ಶಿಕ್ಷಕರು ಕೇವಲ ಪಾಠಗಳನ್ನು ಮಾತ್ರ ಕಲಿಸದೆ, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಿ, ಉತ್ತಮ ನಡವಳಿಕೆ ಹಾಗೂ ಕೃತ್ಯಗಳಿಂದ ಸಮಾಜವನ್ನು ಬದಲಾಯಿಸಬೇಕು. ಜಾತಿ, ಧರ್ಮ, ರಾಜಕೀಯ ಮುಂತಾದವುಗಳಿಂದ ದೂರವಿರುವ ವ್ಯಕ್ತಿಗಳು ಮಾದರಿ ಆಗಿರುತ್ತಾರೆ. ಶಿಕ್ಷಕನ ಕೆಲಸವು ಸದಾ ಆದರ್ಶಪ್ರಾಯವಾಗಿರಬೇಕು, ಶಿಕ್ಷಕರು ಭವಿಷ್ಯದ ಪೀಳಿಗೆಗೆ ಮಾದರಿಯಾಗಬೇಕು ಭವಿಷ್ಯದಲ್ಲಿ ಪ್ರಶಿಕ್ಷಣಾರ್ಥಿಗಳು ಪ್ರಜಾಸತ್ತಾತ್ಮಕ ದೇಶವನ್ನು ಕಟ್ಟಬೇಕಾಗಿದೆ. ಅವರು ಈ ಕಾಲೇಜನ್ನು ಗುರುಕುಲ ವ್ಯವಸ್ಥೆಗೆ ಹೋಲಿಸುತ್ತಾ, ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಯೂ ಉತ್ತಮ ವ್ಯಕ್ತಿತ್ವವಂತರಾಗಬೇಕು. ಪ್ರತೀ ಪ್ರಶಿಕ್ಷಣಾರ್ಥಿ ಗುಣಾತ್ಮಕವಾಗಿ ಹೊರಹೊಮ್ಮಬೇಕು ಎಂಬುದಾಗಿ ಅವರು ಹೇಳಿದರು.ವಿದ್ಯಾರ್ಥಿ ಪ್ರತಿನಿಧಿಗಳಾದ ಶೃತಿ ರಾಥೋಡ ಮತ್ತು ಪ್ರವೀಣ ಕಂದಕೂರ ಅವರು ತಮ್ಮ ಬಿ.ಇಡಿದಲ್ಲಿ ಆದಂತಹ ಅನುಭವಗಳನ್ನು ಹಂಚಿಕೊಂಡರು. ಕಾಲೇಜಿನ ಸಹಕಾರ ಮತ್ತು ಅವರು ಕಲಿತಂತಹ ಪ್ರತಿಯೊಂದು ನೀತಿ ಪಾಠವನ್ನು ಎಲ್ಲರೆದುರು ಸ್ಮರಿಸಿದರು.
ಡಾ. ರುದ್ರೇಶ್ ಬಿ. ಎಸ್.ಯವರು ವಾರ್ಷಿಕ ವರದಿ ವಾಚಿಸಿದರು, ಅತಿಥಿಗಳನ್ನು ಪೂರ್ಣಿಮಾ ಮಟ್ಟಿಮನಿ ಪರಿಚಯಿಸಿದರು. ಯಶೋದಾ ಮಾಳಪ್ಪನವರ ಮತ್ತು ತಂಡದವರು ಭಕ್ತಿಗೀತೆಗೆ ನೃತ್ಯಸಿದರು. ಪೂಜಾ ಸಣಕಂಬಿ ಪ್ರಾರ್ಥಿಸಿದರು. ಸಂಜನಾ ನಿಂಗೋಜಿ ಸ್ವಾಗತಿಸಿದರು. ಭಾರ್ಗವಿ ಚಿಕ್ಕೆರಿ ಹಾಗೂ ಅರ್ಚನಾ ತಳವಾರ ನಿರೂಪಿಸಿದರು.