ಪಾಂಡವಪುರ : ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಕಾಂಗ್ರೆಸ್ -ರೈತಸಂಘ ಕಾರ್ಯಕರ್ತರಿಗೆ ಒಂದೊಂದು ಜವಾಬ್ದಾರಿ ನೀಡಿ ಹೆಚ್ಚಿನ ಸ್ಥಾನ ಪಡೆಯಲು ಶ್ರಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಜಿಪಂ, ತಾಪಂ ಚುನಾವಣೆ ಪೂರ್ವಭಾವಿ ಕಾಂಗ್ರೆಸ್-ರೈತಸಂಘದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚುನಾವಣೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದು ನಮ್ಮ ಪರವಾಗಿ ಫಲಿತಾಂಶ ಬರುವಂತೆ ಕೆಲಸ ಮಾಡಬೇಕು. ಇಲ್ಲವಾದರೆ ಮುಂದೆ ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ-ಜೆಡಿಎಸ್ ಪಕ್ಷದವರು ಟಿವಿ ಮಾಧ್ಯಮಗಳಲ್ಲಿ ಬರಲು ಪ್ರಚಾರಕ್ಕಾಗಿ ಸರ್ಕಾರದ ಮೇಲೆ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆ, ಆರೋಪದಲ್ಲಿ ಯಾವುದೇ ತಿರುಳಿಲ್ಲ. ಆದರೆ, ನಮಗೆ ಸಂಸ್ಕಾರ ಇದೆ. ನಾವು ಅವರ ರೀತಿ ಮಾತನಾಡಲು ಹೋಗಲ್ಲ ಎಂದು ಕಿಡಿಕಾರಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿ ಅದರಿಂದ ಬಂದ ಸಾಲವನ್ನು ಬಿಜೆಪಿ ಸರ್ಕಾರದ ಮೇಲೆ ಹಾಕಿ ಹೋದರು. ಬಳಿಕ ಬಿಜೆಪಿಯವರು ಮಾಡಿದ ಐದಾರು ಸಾವಿರ ಕೋಟಿ ಸಾಲವನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೀರಿಸಿ ರಾಜ್ಯದ ಜನರಿಗೆ ಜನಪರ ಕೆಲಸ ಮಾಡುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ 55 ಲಕ್ಷ ಕೋಟಿ ಸಾಲ ಮಾಡಿದೆ. ಆದರೆ, ನಮ್ಮ ಸರ್ಕಾರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಯಿಂದ ಮಂಡ್ಯ ಜಿಲ್ಲೆಯ ಜನ 130 ಕೋಟಿ ರು. ಅನುದಾನ ನೀಡುತ್ತಿದ್ದೇವೆ ಎಂದರು.
ಗ್ರಾಹಕರಿಗೆ ಹಾಲಿನ ದರ ಏರಿಕೆ ಮಾಡಿ ಅದರ ಹಣವನ್ನು ಉತ್ಪಾದಕರಿಗೆ ನೀಡುತ್ತಿದ್ದೇವೆ. ಕೃಷಿ ವಿವಿ ಮಂಜೂರು ಸೇರಿದಂತೆ ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಸಾಕಷ್ಟು ಯೋಜನೆ ರೂಪಿಸಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಮೇಲುಕೋಟೆ ವೈರಮುಡಿಗೆ 10 ಕೋಟಿ ರು. ಮಂಜೂರು ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ವೈಮನಸ್ಸು ತೊರೆದು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಮಾಡಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಉತ್ತಮವಾದ ಆಡಳಿತ ನೀಡುತ್ತಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು ಸರ್ಕಾರದ ಯೋಜನೆ, ಜನಪರವಾದ ಕಾರ್ಯಕ್ರಮಗಳನ್ನು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಶಾಸಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದೇ ರೀತಿ ಮುಂದಿನ ತಾಪಂ, ಜಿಪಂ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಅಧಿಕಾರ ಹಿಡಿಯುವ ಕೆಲಸ ಮಾಡಬೇಕು ಎಂದರು.
ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಮಾತನಾಡಿ, ಸ್ಥಳೀಯ ಸಂಸ್ಥೆಯ ಚುನಾವಣೆಗಳು ಪಕ್ಷದ ಕಾರ್ಯಕರ್ತರ ಚುನಾವಣೆಯಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ನಾವೆಲ್ಲರು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ನಮ್ಮ ನಾಯಕರ ಕೈಬಲಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಎಂಎಲ್‌ಸಿ ದಿನೇಶ್ ಗೂಳಿಗೌಡ, ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಎಚ್.ಬಿ.ರಾಮು, ಚಂದ್ರಶೇಖರ್, ಕ್ಷೇತ್ರದ ಉಸ್ತುವಾರಿ ಕೊತ್ತತಿ ರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಕಾರ್ಯಧ್ಯಕ್ಷ ಚಿದಾನಂದ, ಅಂಜನ ಶ್ರೀಕಾಂತ್, ರೈತಸಂಘದ ಅಧ್ಯಕ್ಷ ವಿಜಯಕುಮಾರ್, ಎಚ್.ಕೃಷ್ಣೇಗೌಡ, ದಯಾನಂದ ಸೇರಿದಂತೆ ಹಲವರು ಇದ್ದರು.