-ಸುಳ್ಳು ಆರೋಪ ಬಿಟ್ಟು ಸತ್ಯದ ಮೂಲ ಹುಡುಕಿ: ವಿರೋಧಿಗಳಿಗೆ ತರಳಬಾಳು ಶ್ರೀ ಚಾಟಿ । ಬಸವೇಶ್ವರ ದೇವಾಲಯ ಉದ್ಘಾಟನಾ ಸಮಾರಂಭ
------ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಠ ಮತ್ತು ತಮ್ಮ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಬಿಟ್ಟು ಸತ್ಯದ ಮೂಲವನ್ನು ಹುಡುಕಿ ಅವುಗಳ ಬಗ್ಗೆ ಮಾತಾಡಿ ಎಂದು ತಮ್ಮ ವಿರೋಧಿಗಳಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಚಾಟಿ ಬೀಸಿದ್ದಾರೆ.ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಾ ಹೋದರೆ ನಿಮ್ಮನ್ನು ಯಾರೂ ನಂಬವುದಿಲ್ಲ. ಆದ್ದರಿಂದ, ಸತ್ಯದ ಮೂಲವನ್ನು ಅರಿತು ಮಾತನಾಡಿ ಎಂದಿದ್ದಾರೆ.
ತರಳಬಾಳು ಬೃಹನ್ಮಠದ ಚಟುವಟಿಕೆಗಳ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಇಂತಹ ಪರಿಪಾಠವನ್ನು ಕೂಡಲೇ ನಿಲ್ಲಿಸಬೇಕು. ಇಂತಹ ಕೆಟ್ಟ ನಡೆಯನ್ನು ನೋಡಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದಿರುವ ಸ್ವಾಮೀಜಿ ಅಂತಹ ಅಭಿರುಚಿ ಇರುವ ಜನರಿಗೆ ಮಠದಲ್ಲಿ ಪ್ರವೇಶ ನೀಡುವುದಿಲ್ಲ ಎಂದರು.ಘನತೆ ಇರುವ ಪೀಠದ ಬಗ್ಗೆ ಇತ್ತೀಚೆಗೆ ಕೆಲವರು ದಾವಣಗೆರೆಯ ರೆಸಾರ್ಟ್‌ನಲ್ಲಿ ಸಭೆ ಸೇರಿದ್ದು ನಮಗೆ ಬಹಳಷ್ಟು ನೋವು ತಂದಿದೆ. ಶಾಮನೂರು ಶಿವಶಂಕರಪ್ಪನವರು ಸಮಾಜದ ಹಿರಿಯ ರಾಜಕೀಯ ಮುಖಂಡರು ಮತ್ತು ಪೀಠದ ಭಕ್ತರು. ಸಮಾಜದಲ್ಲಿ ಗೌರವದ ಸ್ಥಾನ ಹೊಂದಿರುವವರು. ಅವರೂ ಕೂಡ ಇಂತಹ ಸಭೆಯಲ್ಲಿ ಭಾಗವಹಿಸುತ್ತಾರೆಂದು ನಾವು ಭಾವಿಸಿರಲಿಲ್ಲ. ಇದೊಂದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಪೂರ್ವಾಶ್ರಮದ ಯಾರೇ ಸಂಬಂಧಿಗಳಿಗೆ ನಾವು ಮಠದಿಂದ ಹಣಕಾಸಿನ ನೆರವು ನೀಡಿಲ್ಲ. ವೃದ್ಧಾಪ್ಯದ ಅಂಚಿನಲ್ಲಿದ್ದ ನಮ್ಮ ಪೂರ್ವಾಶ್ರಮದ ತಾಯಿ ಒಮ್ಮೆ ಭೇಟಿಯಾಗಿ ನಮಗೆ ೨೫ ಸಹಸ್ರ ರು. ನೀಡಿದರು. ಏಕೆಂದು ಕೇಳಿದಾಗ ತಾವು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಕೈಗಡ ಪಡೆಯಲಾಗಿತ್ತು ಎಂಬ ವಿಷಯ ಹೇಳಿದರು. ಸಮಾಜದ ಹಲವು ಜನರ ಕಷ್ಟದ ಸಂದರ್ಭದಲ್ಲಿ ನೆರವಾಗಿರುವ ಮಠ, ಪೂರ್ವಾಶ್ರಮದ ತಾಯಿಯವರ ಅನಾರೋಗ್ಯದ ಸಂದರ್ಭದಲ್ಲಿಯೂ ಚಿಕಿತ್ಸೆಗೂ ನೆರವು ನೀಡಿಲ್ಲ. ಇಂತಿರುವಾಗ ಕೆಲವರು ಸುಖಾಸುಮ್ಮನೆ ದೂರುತ್ತಲೇ ಬಂದಿದ್ದಾರೆ ಎಂದರು.ಈ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಾಗ ಆಸ್ಪತ್ರೆಯ ವೆಚ್ಚ ೨೫ ಲಕ್ಷ ರು.ಗಳನ್ನು ಪಡೆಯಲು ಆಸ್ಪತ್ರೆಯ ಡಾ. ಶರಣ್ ಪಾಟೀಲ್ ನಿರಾಕರಿಸಿದ್ದರು. ಬಡ ರೋಗಿಗಳ ಚಿಕಿತ್ಸೆಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸೂಚಿಸಿ ನಮಗೆ ಬಂದಿದ್ದ ಪಾದ ಕಾಣಿಕೆಯಲ್ಲಿ ಹಣವನ್ನು ಅವರಿಗೆ ನೀಡಿದ್ದೇವೆ. ಆ ಹಣ ಬಡವರ ಚಿಕಿತ್ಸೆಗೆ ಬಳಕೆಯಾಗುತ್ತಿದೆ ಎಂದರು.
ದೇಗುಲ ನಿರ್ಮಾಣಕ್ಕೆ ಅಪಸ್ವರ ಬೇಡ: ದೇವಸ್ಥಾನಗಳನ್ನು ಕಟ್ಟುವುದು ಮತ್ತು ದೇವರ ಪೂಜೆ ಮಾಡುವುದು ತಪ್ಪಲ್ಲ. ಈ ಕ್ರಮವನ್ನು ಬಸವಣ್ಣನವರು ಎಲ್ಲಿಯೂ ವಿರೋಧಿಸಿಲ್ಲ. ಬಸವಣ್ಣ ದೇಹವೇ ದೇವಾಲಯ ಎಂದು ಹೇಳಿದ್ದಾರೆಯೇ ವಿನಾ ದೇವಾಲಯ ನಿರ್ಮಾಣ ಮತ್ತು ಪೂಜೆಯ ಬಗ್ಗೆ ವಿರೋಧ ಮಾಡಿಲ್ಲ ಎಂದು ಸ್ವಾಮೀಜಿ ಹೇಳಿದರು.ಜೇನುಗೂಡಿಗೆ ಕಲ್ಲು ಬೇಡ!:ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ತರಳಬಾಳು ಜಗದ್ಗುರು ಮಠ ಮತ್ತು ಶಿಷ್ಯ ಸಮುದಾಯ ಜೇನುಗೂಡು ಇದ್ದಂತೆ. ಅದಕ್ಕೆ ಕಲ್ಲು ಹೊಡೆಯುವ ಪ್ರಯತ್ನವನ್ನು ಯಾರೂ ಮಾಡಬೇಡಿ. ತರಳಬಾಳು ಶ್ರೀಗಳು ನಾಡಿನ ಅಪ್ರತಿಮ ಧರ್ಮಗುರು, ಸಾಮಾಜಿಕ ಚಿಂತಕರು, ನ್ಯಾಯಪರ ಹೋರಾಟಗಾರರು, ರೈತರ ನೆರವಿಗೆ ಸದಾ ಕಾಲ ಮುಂದೆ ನಿಲ್ಲುವವರು ಎಂದು ಬಣ್ಣಿಸಿದರು.
ಶ್ರೀಗಳ ಕಣ್ಣಂಚಿನಲ್ಲಿ ನೀರು: ಮಠದ ಅದೆಷ್ಟೋ ಶಿಷ್ಯರಿಗೆ ಸಹಾಯ ಮಾಡಿರುವ ತಾವು ವೃದ್ಧಾಪ್ಯದಲ್ಲಿದ್ದ ಪೂರ್ವಾಶ್ರಮದ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ತಾವು ನೆರವು ನೀಡಲಾಗಲಿಲ್ಲ. ಜನ್ಮ ನೀಡಿದ ತಾಯಿಯ ಋಣ ತೀರಿಸಲಾಗಲಿಲ್ಲ ಎಂದು ಭಾವುಕರಾಗುವ ವೇಳೆ ಶ್ರೀಗಳ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದನ್ನು ಭಕ್ತರು ಗಮನಿಸಿದರು. ಅದನ್ನು ತೋರ್ಪಡಿಸಿಕೊಳ್ಳದೆ ಅವರು ಮಠದ ಬಗ್ಗೆ ಟೀಕೆ ಆರೋಪ ಮಾಡುವವರ ಬಗ್ಗೆ ಆಕ್ರೋಶಭರಿತರಾದರು.ಗೌರವಾಧ್ಯಕ್ಷ ಹಾಲುವರ್ತಿ ಸಿದ್ದಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಜಗದೀಶ್, ಗ್ರಾಪಂ ಅಧ್ಯಕ್ಷೆ ಉಚ್ಚಂಗಮ್ಮ ರಂಗಪ್ಪ, ಸಮಿತಿ ಅಧ್ಯಕ್ಷ ಕೆ.ಈ. ರಾಜಣ್ಣ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.------
ಫೋಟೊ: ಸಿರಿಗೆರೆ ಸಮೀಪದ ಕೊಳಹಾಳ್ ಗ್ರಾಮದಲ್ಲಿ ನೂತನ ಬಸವೇಶ್ವರ ದೇವಾಲಯ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗುವ ಮೂಲಕ ತರಳಬಾಳು ಶ್ರೀಗಳು ಉದ್ಘಾಟಿಸಿದರು.-------
ಫೋಟೊ: ಸಿರಿಗೆರೆ ಸಮೀಪದ ಕೊಳಹಾಳು ಗ್ರಾಮದಲ್ಲಿ ಆಯೋಜಿಸಿದ್ದ ಬಸವೇಶ್ವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ತರಳಬಾಳು ಶ್ರೀಗಳು ಆಶೀರ್ವಚನ ನೀಡಿದರು.